Site icon Vistara News

Kamal Nath: ದೆಹಲಿಗೆ ಆಗಮಿಸಿದ ಕಮಲ್‌ನಾಥ್;‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ?

Kamal Nath

Congress Leader Kamal Nath Arrives In Delhi; May Join BJP Today?

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಮೊದಲೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ (Kamal Nath) ಅವರು ದೆಹಲಿಗೆ ಆಗಮಿಸಿದ್ದು, ಶೀಘ್ರದಲ್ಲೇ ಅವರು ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕಮಲ್‌ನಾಥ್‌ ಅವರ ಪುತ್ರ ನಕುಲ್‌ನಾಥ್‌ (Nakul Nath) ಅವರು ಕೂಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದಕ್ಕಾಗಿ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕಮಲ್‌ನಾಥ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಇದಕ್ಕೂ ಮೊದಲು ವದಂತಿಗಳು ಹರಡಿದ್ದವು. ಈಗ, ಬಿಜೆಪಿ ವಕ್ತಾರ ನರೇಂದ್ರ ಸಲುಜಾ ಅವರು ಕಮಲ್‌ನಾಥ್‌ ಹಾಗೂ ನಕುಲ್‌ನಾಥ್‌ ಅವರ ಜತೆಗಿನ ಫೋಟೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಜೈ ಶ್ರೀರಾಮ್”‌ ಎಂದು ಬರೆದುಕೊಂಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ 77 ವರ್ಷದ ಕಮಲ್‌ನಾಥ್‌ ಅವರು ದೆಹಲಿಗೆ ಆಗಮಿಸಿದ್ದು, ಅವರು ಬಿಜೆಪಿ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲುಂಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೂ ಕಮಲ್‌ನಾಥ್‌ ಅವರು ಪೂರ್ಣಾವಧಿಗೆ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಲೋಕಸಭೆ ಚುನಾವಣೆಗೂ ಮೊದಲೇ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರುತ್ತಿದ್ದಾರೆ. ಅವರಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಕಮಲ್‌ನಾಥ್‌ ಅವರು ಬಿಜೆಪಿ ಸೇರುವ ವದಂತಿಯನ್ನು ದಿಗ್ವಿಜಯ್‌ ಸಿಂಗ್‌ ಅವರು ಈಗಾಗಲೇ ಅಲ್ಲಗಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಚೌಹಾಣ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಇದಾದ ಬಳಿಕ ಬಿಜೆಪಿಯು ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಿದೆ.

ಇದನ್ನೂ ಓದಿ: Madhya Pradesh: ಮಧ್ಯಪ್ರದೇಶದಲ್ಲಿ 28 ಶಾಸಕರಿಗೆ ಮಂತ್ರಿಗಿರಿ; ಒಬಿಸಿಯವರಿಗೆಷ್ಟು ಖಾತೆ?

ಭಾರಿ ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷವು ಕೇವಲ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿತ್ತು. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಬದಲಿಗೆ ಮೋಹನ್‌ ಯಾದವ್‌ ಅವರನ್ನು ಸಿಎಂ ಎಂದು ಘೋಷಿಸುವ ಮೂಲಕ ಬಿಜೆಪಿಯು ಬದಲಾವಣೆಗೆ ನಾಂದಿ ಹಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version