ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕಮಲನಾಥ್ ಅವರು ತಮ್ಮ ಹುಟ್ಟೂರಾದ ಚಿಂದ್ವಾರಾಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದರು. ಈ ವೇಳೆ ಅವರು ತಮ್ಮ ಹುಟ್ಟುಹಬ್ಬವನ್ನು ಮುಂಚಿತವಾಗಿ, ತನ್ನ ಊರಿನ ಜನರು, ಬೆಂಬಲಿಗರೊಂದಿಗೆ ಆಚರಿಸಿಕೊಂಡರು. ಕಮಲನಾಥ್ ಬರ್ತ್ ಡೇ ನವೆಂಬರ್ 18ರಂದು ಇದ್ದರೂ ಚಿಂದ್ವಾರಾಕ್ಕೆ ಆಗಮಿಸಿದ ನಾಯಕನನ್ನು ಕಂಡು ಖುಷಿಯಾದ ಅಲ್ಲಿನ ಜನ ಅದ್ದೂರಿಯಾಗಿ ಅವರ ಬರ್ತ್ ಡೇ ಆಚರಣೆ ಮಾಡಿದ್ದಾರೆ. ದೊಡ್ಡದೊಂದು ಕೇಕ್ ಕೂಡ ತಯಾರಿಸಲಾಗಿತ್ತು, ಅದನ್ನು ಕಮಲನಾಥ್ ಕಟ್ ಮಾಡಿದ್ದಾರೆ. ಆದರೆ ಆ ಕೇಕ್ ದೇವಸ್ಥಾನದ ಆಕಾರದಲ್ಲಿ ಇದ್ದಿದ್ದು ಮತ್ತು ಅದನ್ನು ಕಮಲನಾಥ್ ಚಾಕುವಿನಿಂದ ಕತ್ತರಿಸಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.
ಚಿಂದ್ವಾರಾದಲ್ಲಿರುವ ಕಮಲನಾಥ್ ಮನೆಯ ಸಮೀಪವೇ ಈ ಬರ್ತ್ ಡೇ ಸೆಲೆಬ್ರೇಶನ್ ನಡೆದಿದೆ. ಈ ಆಚರಣೆ ಸಿಕ್ಕಾಪಟೆ ಅದ್ದೂರಿಯಾಗಿತ್ತು. ಅಲ್ಲಿ ನೆರೆದಿದ್ದವರೆಲ್ಲ ಕಮಲನಾಥ್ ಅವರನ್ನು ಭಾರತೀಯ ರಾಜಕೀಯದ ಕೊಹಿನೂರು ಎಂದು ಕರೆದು, ಹೊಗಳಿದರು. ಅಲ್ಲಿ ಸಂಗೀತ, ಪಟಾಕಿ ಇತ್ತು. ವಿವಿಧ ಉಡುಗೊರೆಗಳನ್ನು ಕೂಡ ಕಮಲನಾಥ್ ಅವರಿಗೆ ನೀಡಿದರು. ಆದರೆ ಕೇಕ್ ವಿವಾದ ಸೃಷ್ಟಿಸಿತು. ಅದೊಂದು ದೇವಸ್ಥಾನದ ಆಕೃತಿಯಲ್ಲೇ ಇದೆ. ಅಷ್ಟೇ ಅಲ್ಲ, ಆಂಜನೇಯನ ಸ್ಟಿಕರ್, ಭಗವಾ ಧ್ವಜ ಕೂಡ ಅದರ ಮೇಲೆ ಇತ್ತು ಎಂದು ಮಧ್ಯಪ್ರದೇಶ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕಮಲನಾಥ್ ಅವರು ತಾವು ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ತಮ್ಮ ಹುಟ್ಟೂರಾದ ಚಿಂದ್ವಾರಾದಲ್ಲಿ 121 ಅಡಿ ಎತ್ತರದ ಹನುಮ ಮಂದಿರವನ್ನು ಕಟ್ಟಿಸಿದ್ದಾರೆ. ಹಾಗಾಗಿ ಅದೇ ಮಾದರಿಯ ಕೇಕ್ ಕತ್ತರಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ಬಿಜೆಪಿ ಇದನ್ನು ಒಪ್ಪುತ್ತಿಲ್ಲ. ದೇವಸ್ಥಾನದ ಆಕಾರದ ಕೇಕ್ ಕತ್ತರಿಸುವ ಅಗತ್ಯವೇನಾದರೂ ಏನಿತ್ತು ಎಂದು ಪ್ರಶ್ನಿಸಿದೆ. ಅದೂ ಆ ದೇವಸ್ಥಾನ ಕೇಸರಿ-ಬಿಳಿ-ಹಸಿರಾಗಿ ಇದೆ ಎಂಬ ಆರೋಪವನ್ನೂ ಮಾಡಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಕೇಕ್ನ್ನು ದೇವಸ್ಥಾನದ ಆಕಾರದಲ್ಲಿ ಮಾಡಿಸಿದ್ದಲ್ಲದೆ, ಅದರ ಮೇಲೆ ಭಗವಾನ್ ಹನುಮಾನ್ ಚಿತ್ರವನ್ನೂ ಇಟ್ಟು ನಂತರ ಅದನ್ನು ಕತ್ತರಿಸಲಾಗಿದೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ, ಸನಾತನ ಧರ್ಮಕ್ಕೆ ಮಾಡಿದ ಅವಮಾನ. ಹಿಂದು ಸಮಾಜ ಇದನ್ನೆಂದೂ ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಚಿಂದ್ವಾರಾದ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿವೇಕ್ ಬಂಟಿ ಸಹು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಮಾಜಿ ಸಿಎಂ ಕಮಲನಾಥ್ ಅವರು ಚಿಂದ್ವಾರಾದಲ್ಲಿ ಹನುಮಾನ್ ಮಂದಿರವನ್ನೇನೋ ಕಟ್ಟಿಸಿದ್ದಾರೆ. ಆದರೆ ಅವರಿಗೆ ದೇವರಲ್ಲಿ ನಂಬಿಕೆ ಇದ್ದಂತೆ ಇಲ್ಲ. ಹಿಂದುಗಳ ಧಾರ್ಮಿಕ ಭಾವನೆಯನ್ನು ಕಮಲನಾಥ್ ಮತ್ತು ಅವರ ಕುಟುಂಬ ಸದಾ ಅವಮಾನಿಸುತ್ತಿರುತ್ತದೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ (ನವೆಂಬರ್ 8) ಇಂದೋರ್ನಲ್ಲಿ ನಡೆದ ಗುರು ನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಕಮಲನಾಥ್ ಅವರನ್ನು ಸನ್ಮಾನಿಸಲಾಗಿತ್ತು. ಆಗಲೂ ಕೂಡ ವಿವಾದ ಸೃಷ್ಟಿಯಾಗಿತ್ತು. 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ಧಂಗೆಯಲ್ಲಿ ಕಮಲನಾಥ್ ಹೆಸರೂ ಕೇಳಿಬಂದಿತ್ತು. ಅಂಥವರನ್ನು ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಅಗತ್ಯವೇನಿತ್ತು ಎಂದು ಸಿಖ್ ಮುಖ್ಯ ಸ್ತೋತ್ರಕಾರ ಮನ್ಪ್ರೀತ್ ಸಿಂಗ್ ಕಾನ್ಪುರಿ ಪ್ರಶ್ನಿಸಿದ್ದರು. ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಗುರುನಾನಕ್ ಜಯಂತಿ ಆಚರಣೆಯಲ್ಲಿ ಕಾಂಗ್ರೆಸ್ ನಾಯಕ ಕಮಲನಾಥ್ಗೆ ಸನ್ಮಾನ; ಸಿಡಿದೆದ್ದ ಸಿಖ್ ಸ್ತೋತ್ರ ಗಾಯಕ!