ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಕಾಂಗ್ರೆಸ್ ನಾಯಕ, ವಕೀಲ ಕೌಸ್ತವ್ ಬಾಗ್ಚಿ ಅವರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಸುದೀರ್ಘ ಸಮಯದಿಂದಲೂ ಕೌಸ್ತವ್ ಬಾಗ್ಚಿ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ಆಡಳಿತ ಕ್ರಮವನ್ನು ಪ್ರಶ್ನಿಸುತ್ತ, ವಿರೋಧಿಸುತ್ತಲೇ ಇದ್ದರು. ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಅವರು ಮಮತಾ ಬ್ಯಾನರ್ಜಿ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ಬರ್ಟೊಲ್ಲಾ ಪೊಲೀಸ್ ಠಾಣೆಯಲ್ಲಿ ಬಾಗ್ಚಿ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಅವರ ಬಂಧನವಾಗಿದೆ.
ಕೋಲ್ಕತ್ತ ಪೊಲೀಸರು ಕೌಸ್ತವ್ ಬಾಗ್ಚಿ ಮನೆಗೆ ಶನಿವಾರ ಮುಂಜಾನೆ 3ಗಂಟೆಯ ಹೊತ್ತಿಗೆ ತಲುಪಿದ್ದರು. ಪೊಲೀಸರು ಮತ್ತು ಬಾಗ್ಚಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದಾದ ಬಳಿಕ ಸುಮಾರು 7.30ರ ಹೊತ್ತಿಗೆ ಬಾಗ್ಚಿ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೌಸ್ತವ್ ಬಾಗ್ವಿ ಪೋಸ್ಟ್ ಹಾಕಿ ‘ಕೊನೆಗೂ ನಾನು ಅರೆಸ್ಟ್ ಆದೆ’ ಎಂದಿದ್ದಾರೆ. ಇನ್ನು ಕೌಸ್ತವ್ ಬಾಗ್ಚಿ ಬಂಧನದ ಸುದ್ದಿ ಕೇಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬರ್ಟೊಲ್ಲಾ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೋಲ್ಕತ್ತ ಪೊಲೀಸರು ಇಂದು ಕೌಸ್ತವ್ ಅವರನ್ನು ಬ್ಯಾಂಕ್ಶಾಲ್ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಸಾಗರ್ದಿಘಿ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ , ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಂಜನ್ ಅಧೀರ್ ಚೌಧರಿ ವಿರುದ್ಧ ಮಾತನಾಡಿದ್ದರು. ಅದೇ ವಿಷಯ ಇಟ್ಟುಕೊಂಡು ಕೌಸ್ತವ್ ಅವರು ಮಮತಾ ಬ್ಯಾನರ್ಜಿಯವರನ್ನು ಟೀಕಿಸಿದ್ದರು. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ, ಏಕಾಂಗಿ ಸ್ಪರ್ಧೆ; ಸ್ಪಷ್ಟಪಡಿಸಿದ ಮಮತಾ ಬ್ಯಾನರ್ಜಿ