Site icon Vistara News

Mallikarjun Kharge: ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

Mallikarjun Kharge

Election Commission, Congress face off over voter turnout data

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಶತಾಯ ಗತಾಯ ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದ (India Bloc) ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge_ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವರ್ಚ್ಯುವಲ್‌ ಮೂಲಕ ಶನಿವಾರ ಮಧ್ಯಾಹ್ನ (ಜನವರಿ 13) ಇಂಡಿಯಾ ಒಕ್ಕೂಟದ ಸಭೆ ನಡೆದಿದ್ದು, ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಒಕ್ಕೂಟದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಚಾಲಕ ಹುದ್ದೆ ತಿರಸ್ಕರಿಸಿದ ನಿತೀಶ್‌ ಕುಮಾರ್‌

ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಇಂಡಿಯಾ ಒಕ್ಕೂಟದ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ನಿತೀಶ್‌ ಕುಮಾರ್‌ ಅವರೇ ಸಂಚಾಲಕರಾಗಬೇಕು ಎಂದು ಸಭೆಯಲ್ಲಿ ಒಕ್ಕೊರಲಿನ ಒತ್ತಾಯ ಕೇಳಿಬಂದಿತು. ಆದರೆ, ಇದನ್ನು ನಯವಾಗಿಯೇ ತಿರಸ್ಕರಿಸಿದ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ನಾಯಕರೇ ಈ ಜವಾಬ್ದಾರಿ ಹೊತ್ತುಕೊಳ್ಳಲಿ ಎಂಬುದಾಗಿ ಸಭೆಯಲ್ಲಿ ಭಾವಹಿಸಿದ ಜೆಡಿಯು ನಾಯಕ ಸಂಜಯ್‌ ಝಾ ಮಾಹಿತಿ ನೀಡಿದ್ದಾರೆ.

ಮಮತಾ, ಅಖಿಲೇಶ್‌ ಗೈರು

ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಹಾಗೂ ಸಂಚಾಲಕರನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಇಂಡಿಯಾ ಒಕ್ಕೂಟದ ಸಭೆ ಮಹತ್ವ ಪಡೆದಿದ್ದರೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಗೈರಾದರು. ಕಾಂಗ್ರೆಸ್‌ ಜತೆ ಮಮತಾ ಬ್ಯಾನರ್ಜಿ ಅವರು ಸೀಟು ಹಂಚಿಕೆ ವಿಷಯದಲ್ಲಿ ಬಿಕ್ಕಟ್ಟು ಉಂಟಾದ ಕಾರಣ ಅವರು ಗೈರಾದರು ಎಂದು ತಿಳಿದುಬಂದಿದೆ. ಇನ್ನು ಕೆಲ ತಿಂಗಳ ಹಿಂದಷ್ಟೇ ನಡೆದ ಪಂಚ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್‌ ಜತೆ ಸಮಾಜವಾದಿ ಪಕ್ಷವು ಮುನಿಸಿಕೊಂಡಿದೆ. ಇದೇ ಕಾರಣಕ್ಕೆ ಅಖಿಲೇಶ್‌ ಯಾದವ್‌ ಅವರು ಗೈರಾದರು ಎನ್ನಲಾಗಿದೆ.

ಇದನ್ನೂ ಓದಿ: Congress Karnataka: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಖಡಕ್‌ ವಾರ್ನಿಂಗ್

ಪ್ರಧಾನಿ ಅಭ್ಯರ್ಥಿಯ ಘೋಷಣೆ?

ಒಂದೆಡೆ ಬಿಜೆಪಿಯು ಲೋಕಸಭೆ ಚುನಾವಣೆಗೆ ಸಿದ್ಧವಾಗಿದೆ. ರಾಮಮಂದಿರ ವಿಷಯವೇ ಬಿಜೆಪಿಗೆ ಭಾರಿ ಪ್ಲಸ್‌ ಪಾಯಿಂಟ್‌ ಆಗಲಿದೆ. ಇದರ ಬೆನ್ನಲ್ಲೇ, ಇಂಡಿಯಾ ಒಕ್ಕೂಟ ಕೂಡ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಚುನಾವಣೆ ಫಲಿತಾಂಶದ ಬಳಿಕವೇ ಪ್ರಧಾನಿಯ ಆಯ್ಕೆ ಎಂಬ ಮಾತುಗಳನ್ನಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version