Site icon Vistara News

ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ ಎಂದು ಪ್ರಶ್ನಿಸಿದ್ದ ರಾಹುಲ್ ಗಾಂಧಿಗೆ 2 ವರ್ಷ ಜೈಲು; ಜಾಮೀನು ಪಡೆದ ಕಾಂಗ್ರೆಸ್ ನಾಯಕ

Congress Leader Rahul Gandhi convicted in all thieves Have Modi Surname remark in 2019

#image_title

ನವ ದೆಹಲಿ: 2019ರ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ (Rahul Gandhi)ಯವರು ಕರ್ನಾಟಕದ ಕೋಲಾರದಲ್ಲಿ, ಪ್ರಚಾರ ಸಭೆಯಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಸರ್​ನೇಮ್​​ಗಳೂ ಮೋದಿ ಎಂದೇ ಇರುತ್ತದೆ. ಅದು ಹೇಗೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಅವಹೇಳನ ಮಾಡಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿಯವರು ಪೊಲೀಸರಿಗೆ ದೂರು ನೀಡಿ, ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದರ ವಿಚಾರಣೆಯನ್ನು ನಡೆಸಿದ ಸೂರತ್​ ಕೋರ್ಟ್​ ಈಗ ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿ, 2ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗೇ, 15 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ಸದ್ಯ ರಾಹುಲ್ ಗಾಂಧಿ ಜಾಮೀನು ಪಡೆದು ಶಿಕ್ಷೆಯಿಂದ ಪಾರಾಗಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ, ಲಲಿತ್ ಮೋದಿ, ನೀರವ್​ ಮೋದಿ..ಮತ್ತಿತರರ ಉಲ್ಲೇಖ ಮಾಡುತ್ತ ಈ ಮೇಲಿನ ಮಾತುಗಳನ್ನಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದಲೂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಮಧ್ಯೆ ದೂರುದಾರ ಪೂರ್ಣೇಶ್ ಮೋದಿಯವರು ಕೋರ್ಟ್​ಗೆ ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ಹಾಜರಾಗಬೇಕು ಎಂದೂ ಅರ್ಜಿ ಸಲ್ಲಿಸಿದ್ದರು. ಆದರೆ ಅದರ ವಿರುದ್ಧ ರಾಹುಲ್ ಗಾಂಧಿ ಪರ ವಕೀಲರು ಹೈಕೋರ್ಟ್​​ ಮೆಟ್ಟಿಲೇರಿದ್ದರು. ರಾಹುಲ್ ಗಾಂಧಿಯವರು ವಿಚಾರಣೆಗೆ ಹಾಜರಾಗಬೇಕು ಎಂದೇನೂ ಇಲ್ಲ ಎಂದು ಹೈಕೋರ್ಟ್​ ಹೇಳಿತ್ತು. ಆದರೆ ಕಳೆದ ತಿಂಗಳು ಗುಜರಾತ್​ ಹೈಕೋರ್ಟ್​ ಈ ತಡೆಯನ್ನು ಹಿಂಪಡೆದಿದೆ. ಅದರ ಬೆನ್ನಲ್ಲೇ ಸೂರತ್​ ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಶುರುವಾಗಿತ್ತು. ಫೆಬ್ರವರಿಯಲ್ಲಿ ವಿಚಾರಣೆ ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರು ಮಾರ್ಚ್​ 23ಕ್ಕೆ ತೀರ್ಪು ಕಾಯ್ದಿರಿಸಿದ್ದರು. ಅದರಂತೆ ಇಂದು ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ಕೊಟ್ಟಿದ್ದಾರೆ.

ಇಂದು ಅಂತಿಮ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ರಾಹುಲ್ ಗಾಂಧಿ ಸೂರತ್​ ಕೋರ್ಟ್​ಗೆ ಹೋಗಿದ್ದರು. ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೋರ್ಟ್ ಹೊರಗೆ ಕೂಡ ಬಂದೋಬಸ್ತ್​ ಮಾಡಲಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್​ ಪಕ್ಷ, ರಾಹುಲ್ ಗಾಂಧಿಯವರನ್ನು ಬೆಂಬಲಿಸಿ ವಿವಿಧೆಡೆ ಪೋಸ್ಟರ್​ ಹಾಕಿತ್ತು. ಬಿಜೆಪಿಯ ಇಂಥ ಸರ್ವಾಧಿಕಾರಿ ಧೋರಣೆಗೆ ಬಗ್ಗುವುದಿಲ್ಲ ಎಂಬಂಥ ಹೇಳಿಕೆಯನ್ನು ಈ ಪೋಸ್ಟರ್​ಗಳಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Rahul Gandhi: ಅದಾನಿ ಬಗ್ಗೆ ಮಾತಾಡಿದ್ದಕ್ಕೆ ಪೊಲೀಸರ ಆಗಮನ? ರಾಹುಲ್‌ ಗಾಂಧಿ ಪ್ರತಿಕ್ರಿಯೆಯಲ್ಲಿ ಇನ್ನೇನಿದೆ?

Exit mobile version