ನವ ದೆಹಲಿ: ಎಲ್ಲ ಕಳ್ಳರ ಸರ್ನೇಮ್ ಮೋದಿ ಎಂದೇ ಇರುತ್ತದೆ ಎಂದು 2019ರ ಚುನಾವಣೆಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಈಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಅವರನ್ನು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಮಾ.23ರಂದು ಗುಜರಾತ್ನ ಸೂರತ್ ಕೋರ್ಟ್ ತೀರ್ಪು ನೀಡಿತ್ತು.
2019ರ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಚಾರ ಮಾಡುತ್ತ ‘ಎಲ್ಲ ಕಳ್ಳರ ಹೆಸರುಗಳ ಉಪನಾಮ ಮೋದಿ ಎಂದೇ ಇರುತ್ತದೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ನೀಡಿದ್ದರು. ಹಾಗೇ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾ.23ರಂದು ತೀರ್ಪು ನೀಡಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು. ಅಷ್ಟೇ ಅಲ್ಲ, 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. 30 ದಿನಗಳ ಜಾಮೀನು ನೀಡಿತ್ತು. ಅಷ್ಟರೊಳಗೆ ರಾಹುಲ್ ಗಾಂಧಿ ಪರ ಕಾಂಗ್ರೆಸ್ನ ಯಾರಾದರೂ ಮೇಲ್ಮನವಿ ಸಲ್ಲಿಸಿ, ಅವರಿಗೆ ನೀಡಿರುವ ಶಿಕ್ಷೆಯನ್ನು ರದ್ದುಗೊಳಿಸಬಹುದು ಎಂದು ಹೇಳಿತ್ತು. ಆದರೆ ಕೋರ್ಟ್ನ ಈ ಪ್ರಕ್ರಿಯೆಗೂ, ಲೋಕಸಭೆಯ ನಿಯಮಗಳಿಗೂ ಸಂಬಂಧವಿಲ್ಲ. ಲೋಕಸಭೆ ಈಗ ತನ್ನ ಪ್ರಕ್ರಿಯೆ ಮಾಡಿದೆ.
ಇದನ್ನೂ ಓದಿ: Rahul Gandhi: ನಾನು ಖರ್ಗೆಯವರನ್ನು ಮುಟ್ಟಿದರೆ, ಸಿಂಬಳ ಒರೆಸಿದೆ ಎನ್ನುತ್ತಾರೆ ಎಂದ ರಾಹುಲ್ ಗಾಂಧಿ; ಸಂಸತ್ತಿಗೆ ಭೇಟಿ
ಇದೀಗ ಲೋಕಸಭೆ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿ ನೋಟಿಸ್ ಕೊಟ್ಟಿದೆ. ‘ಮಾರ್ಚ್ 23ರಂದು ರಾಹುಲ್ ಗಾಂಧಿಯನ್ನು ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ಜನಪ್ರತಿನಿಧಿಗಳ ಕಾಯ್ದೆ 1951ರ, ಆರ್ಟಿಕಲ್ 102 (1) (e)yಯ ನಿಬಂಧನೆಗಳಡಿ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಹೇಳಿದೆ.
ಶಶಿ ತರೂರ್ ಟ್ವೀಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಟ್ವೀಟ್ ಮಾಡಿ, ರಾಹುಲ್ ಗಾಂಧಿಯವರಿಗೆ ಲೋಕಸಭೆ ನೀಡಿದ ನೋಟಿಸ್ನ್ನು ಶೇರ್ ಮಾಡಿಕೊಂಡಿದ್ದಾರೆ. ‘ಕೋರ್ಟ್ ರಾಹುಲ್ ಗಾಂಧಿಯವರಿಗೆ ಕಾಲಾವಕಾಶ ಕೊಟ್ಟಿದೆ. ಆದರೆ ಅವರು ದೋಷಿ ಎಂದು ತೀರ್ಪು ಬಂದ 24ಗಂಟೆಯಲ್ಲೇ ಅವರನ್ನು ಎಂಪಿ ಸ್ಥಾನದಿಂದ ಅನರ್ಹಗೊಳಿಸಿದ್ದು ನಿಜಕ್ಕೂ ನನಗೆ ಶಾಕ್ ಆಗಿದೆ’ ಎಂದು ಹೇಳಿದ್ದಾರೆ.