Site icon Vistara News

Rahul Gandhi: ರಾಯ್‌ಬರೇಲಿಯನ್ನೇ ಆಯ್ಕೆ ಮಾಡಿಕೊಂಡ ರಾಹುಲ್‌ ಗಾಂಧಿ; ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!

Rahul Gandhi

Congress leader Rahul Gandhi retains Raebareli Lok Sabha seat; Priyanka Gandhi to contest from Wayanad

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ರಾಹುಲ್‌ ಗಾಂಧಿ ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲ, ಪ್ರಶ್ನೆಗೆ ತೆರೆಬಿದ್ದಿದೆ. ತಾಯಿ ಸೋನಿಯಾ ಗಾಂಧಿ (Sonia Gandhi) ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯನ್ನೇ ರಾಹುಲ್‌ ಗಾಂಧಿ (Rahul Gandhi) ಉಳಿಸಿಕೊಂಡಿದ್ದಾರೆ. ಇನ್ನು, ರಾಹುಲ್‌ ಗಾಂಧಿಯಿಂದ ತೆರವಾಗುವ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಪ್ರಿಯಾಂಕಾ ವಾದ್ರಾ (Priyanka Vadra) ಅವರು ವಯನಾಡಿನಿಂದ ಸ್ಪರ್ಧಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಯಾವ ಕ್ಷೇತ್ರದ ಸಂಸದರಾಗಿ ಮುಂದುವರಿಯಬೇಕು ಎಂಬ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು. “ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲಿದ್ದಾರೆ. ವಯನಾಡು ಲೋಕಸಭೆ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಪಕ್ಷವು ತೀರ್ಮಾನ ತೆಗೆದುಕೊಂಡಿದೆ” ಎಂಬುದಾಗಿ ಖರ್ಗೆ ಮಾಹಿತಿ ನೀಡಿದರು.

ಸಭೆಯ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, “ನಾನು ವಯನಾಡಿನ ಜನತೆ ಜತೆ ಕಳೆದ ಐದು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ವರ್ಷಗಳಿಂದ ವಯನಾಡು ಸಂಸದನಾಗಿದ್ದ ನನಗೆ ಅಲ್ಲಿನ ಜನ ತೋರಿಸಿದ ಪ್ರೀತಿ, ಬೆಂಬಲ ಅಪಾರವಾದುದು. ಈಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ನಾನು ಕೂಡ ವಯನಾಡಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ” ಎಂದು ಹೇಳಿದರು.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭಾಗವಹಿಸಿದರು. ಇನ್ನು, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನನ್ನಾಗಿ ರಾಹುಲ್‌ ಗಾಂಧಿ ಅವರನ್ನೇ ಆಯ್ಕೆ ಮಾಡುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ರಾಹುಲ್‌ ಗಾಂಧಿ ಅವರು 2019ರಲ್ಲಿ ಉತ್ತರ ಪ್ರದೇಶ ಅಮೇಥಿ ಹಾಗೂ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನುಭವಿಸಿದ ಕಾರಣ ಅವರು ವಯನಾಡು ಸಂಸದರಾಗಿ ಮುಂದುವರಿದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು 2004ರಿಂದಲೂ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಯನಾಡು ಹಾಗೂ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ಕಾರಣ, ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿತ್ತು.

ಈಗ ರಾಹುಲ್‌ ಗಾಂಧಿ ಅವರು ತಾಯಿಯ ಕ್ಷೇತ್ರವಾದ ರಾಯ್‌ಬರೇಲಿಯನ್ನೇ ಉಳಿಸಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಪಡೆದಿರುವ ಕಾರಣ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವಂತಾಗಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇವರಿಗೆ ಇದೇ ಮೊದಲ ಚುನಾವಣೆ ಆಗಿದೆ. ಚುನಾವಣೆಗೂ ಮೊದಲು, ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಿಂದ, ರಾಹುಲ್‌ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Exit mobile version