ನವದೆಹಲಿ: 10 ದಿನಗಳ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈಗಾಗಲೇ ಅಲ್ಲಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಿಂತು, ಭಾರತದ ವಿರುದ್ಧ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಆಪಾದನೆಗಳ ಹೊರೆ ಹೊರಿಸಿದ್ದಾರೆ. ಇದೇ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದಾರೆ.
ಅದರ ಬೆನ್ನಲ್ಲೇ ಇಂದು (ಮಾ.6) ರಾಹುಲ್ ಗಾಂಧಿ ಬ್ರಿಟಿಷ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುವರು. ಬಳಿಕ ಲಂಡನ್ನಲ್ಲಿರುವ ಭಾರತೀಯ ಮೂಲದವರ ಜತೆ ಸಂವಾದ ನಡೆಸಲಿದ್ದಾರೆ. ಹಾಗೇ, ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ನಿಂದ ಆಯೋಜಿಸಲಾಗಿರುವ ಸುದ್ದಿಗೋಷ್ಠಿಯಲ್ಲಿ ಕೂಡ ಮಾತನಾಡುವರು. ಅಷ್ಟಲ್ಲದೆ, ಕೆಲವು ಉದ್ಯಮಿಗಳ ಜತೆ ಖಾಸಗಿ ಸಭೆ ನಡೆಸಲಿದ್ದಾರೆ. ಲಂಡನ್ನ ಚಾಥಮ್ ಹೌಸ್ನಲ್ಲಿ ಚಿಂತಕರ ಚಾವಡಿ ನಡೆಸುವರು.
ಕೆಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಉಪನ್ಯಾಸ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಗತ್ಯವಾಗಿರುವ ಸಾಂಸ್ಥಿಕ ಚೌಕಟ್ಟನ್ನು ನಿರ್ಬಂಧಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಮೂಲ ಸ್ವರೂಪವೇ ದಾಳಿಗೆ ಒಳಗಾಗಿದೆ’ ಎಂದು ಹೇಳಿದರು. ಅಷ್ಟೇ ಅಲ್ಲ, ‘ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಮೂಲಕ ನನ್ನ ಮತ್ತು ಇತರ ಹಲವರ ಮೇಲೆ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ. ನಮ್ಮ ಮೊಬೈಲ್ಗಳೆಲ್ಲ ಪೆಗಾಸಸ್ ಕಣ್ಗಾವಲಿನಲ್ಲಿ ಇದೆ’ ಎಂದೂ ಹೇಳಿದ್ದರು. ರಾಹುಲ್ ಗಾಂಧಿ ಉಪನ್ಯಾಸದ ವಿರುದ್ಧ ಬಿಜೆಪಿ ನಾಯಕರು ತೀವ್ರ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರೊಬ್ಬ ಸರಣಿ ಅಪರಾಧಿ ಎಂದು ಹೇಳಿದ್ದಾರೆ.