ಭಾರತದಲ್ಲಿ ‘ಭಾರತ್ ಜೋಡೋ ಯಾತ್ರೆ’ಯನ್ನು ಯಶಸ್ವಿಯಾಗಿ ಮುಗಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಇದೀಗ ಯುಎಸ್ ಪ್ರವಾಸದಲ್ಲಿದ್ದಾರೆ ಮತ್ತು ಅಲ್ಲಿ ‘ಅಮೆರಿಕನ್ ಟ್ರಕ್ ಯಾತ್ರೆ’ ನಡೆಸಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ವರೆಗೆ 190 ಕಿಮೀ ದೂರ ಟ್ರಕ್ನಲ್ಲಿ ಸಾಗಿದ್ದಾರೆ. ರಾಹುಲ್ ಗಾಂಧಿಯವರು ಪ್ರಯಾಣಿಸಿದ ಟ್ರಕ್ನ ಡ್ರೈವರ್ ಹೆಸರು ತಲ್ಜಿಂದರ್ ಸಿಂಗ್ ಎಂದಾಗಿದ್ದು, ಇವರು ಮೂಲತಃ ಭಾರತದವರೇ ಆಗಿದ್ದಾರೆ. 190 ಕಿಮೀ ದೂರ ರಾಹುಲ್ ಗಾಂಧಿ ಮತ್ತು ಚಾಲಕ ತಲ್ಜಿಂದರ್ ಸಿಂಗ್ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತ ಸಾಗಿದ್ದಾರೆ.
ಭಾರತದ ಟ್ರಕ್ ಡ್ರೈವರ್ಗಳು, ಅಮೆರಿಕನ್ ಟ್ರಕ್ ಚಾಲಕರ ಕೆಲಸದಲ್ಲಿರುವ ವ್ಯತ್ಯಾಸ, ಇವರಿಗೆ ಎದುರಾಗಿರುವ ಸವಾಲುಗಳು, ಸರ್ಕಾರಗಳಿಂದ ಸಿಗುವ ಸವಲತ್ತುಗಳು ಮತ್ತಿತರ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಮತ್ತು ತಲ್ಜಿಂದರ್ ಸಿಂಗ್ ಮಾತಾಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿಯವರು ಭಾರತದಲ್ಲಿ ತಾವು ಟ್ರಕ್ನಲ್ಲಿ ಪ್ರಯಾಣ ಮಾಡಿದ್ದರ ಬಗ್ಗೆಯೂ ತಲ್ಜಿಂದರ್ಗೆ ಹೇಳಿಕೊಂಡಿದ್ದಾರೆ. ‘ಭಾರತದಲ್ಲಿ ಒಮ್ಮೆ ನಾನು ಹರ್ಯಾಣ ಮುರ್ತಾಲಾದಿಂದ ಅಂಬಾಲಾಕ್ಕೆ, ಅಂಬಾಲಾದಿಂದ ಚಂಡಿಗಢ್ಗೆ ಮತ್ತು ದೆಹಲಿಯಿಂದ ಚಂಡಿಗಢ್ಗೆ ಟ್ರಕ್ನಲ್ಲಿ ಪ್ರಯಾಣ ಮಾಡಿದ್ದೆ’ ಎಂಬುದನ್ನು ರಾಹುಲ್ ಗಾಂಧಿ ತಲ್ಜಿಂದರ್ ಸಿಂಗ್ಗೆ ತಿಳಿಸಿದ್ದಾರೆ.
ಹಾಡು ಹಾಕೆಂದ ರಾಹುಲ್ ಗಾಂಧಿ
190 ಕಿಮೀ ದೂರದ ಪ್ರಯಾಣದಲ್ಲಿ ರಾಹುಲ್ ಗಾಂಧಿಯವರು ಡ್ರೈವರ್ ಜತೆ ಮಾತಾಡುತ್ತಿದ್ದರು. ಇದೇ ವೇಳೆ ಅವರು ಚಾಲಕ ತಲ್ಜಿಂದರ್ ಸಿಂಗ್ ಬಳಿ, ಯಾವುದಾದರೂ ಒಳ್ಳೆಯ ಹಾಡುಗಳನ್ನು ಹಾಕುವಂತೆ ಕೇಳಿದ್ದಾರೆ. ಯಾವ ಹಾಡು ಬೇಕೆಂದು ಕೇಳಿದ್ದಕ್ಕೆ, ಮೃತ ಪಂಜಾಬಿ ಗಾಯಕ ಸಿಧು ಮೂಸೇವಾಲಾ (ಹತ್ಯೆಗೀಡಾದ ಗಾಯಕ) ಹಾಡಿರುವ ಹಾಡುಗಳನ್ನು ಪ್ಲೇ ಮಾಡಲು ಹೇಳಿದ್ದಾರೆ. ಅದರಂತೆ ಚಾಲಕ ಸಿಧು ಮೂಸೇವಾಲಾ ಹಾಡನ್ನೇ ಹಾಕಿದ್ದಾರೆ.
ಅದಾದ ಬಳಿಕ ನೀವು ಇಲ್ಲಿ ಎಷ್ಟು ಸಂಪಾದನೆ ಮಾಡುತ್ತೀರಿ ಎಂಬ ಪ್ರಶ್ನೆಯನ್ನೂ ರಾಹುಲ್ ಗಾಂಧಿಯವರು ಲಾರಿ ಚಾಲಕ ತಲ್ಜಿಂದರ್ ಸಿಂಗ್ ಬಳಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚಾಲಕ ‘ಭಾರತದಲ್ಲಿ ಇದ್ದರೆ ಎಷ್ಟು ಹಣ ಗಳಿಸುತ್ತಿದ್ದೆನೋ, ಅದಕ್ಕಿಂತಲೂ ತುಂಬ ಜಾಸ್ತಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಅಂದಹಾಗೇ ರಾಹುಲ್ ಗಾಂಧಿ ಮತ್ತು ಟ್ರಕ್ ಡ್ರೈವರ್ ಇಬ್ಬರೂ ಟಿ ಶರ್ಟ್ ಧರಿಸಿದ್ದರು. ರಾಹುಲ್ ಗಾಂಧಿಯವರು ಬೂದು ಬಣ್ಣದ ಟಿಶರ್ಟ್ ಮತ್ತು ಟ್ರಕ್ ಚಾಲಕ ನೀಲಿ ಬಣ್ಣದ ಟಿ ಶರ್ಟ್ ಹಾಕಿಕೊಂಡು, ಒಳ್ಳೆ ಸ್ನೇಹಿತರಂತೆ ಹರಟುತ್ತ ಟ್ರಕ್ ರೈಡ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.