ಬೆಂಗಳೂರು: 2022ರ ಸೆಪ್ಟೆಂಬರ್ 7ರಿಂದ ಆರಂಭವಾಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ((Bharat Jodo Yatra)) 2023ರ ಜನವರಿ 30ರಂದು, ಸೋಮವಾರ ಸಮಾರೋಪಗೊಳ್ಳಲಿದೆ. ರಾಹುಲ್ ಗಾಂಧಿ(Rahul Gandhi) ನೇತೃತ್ವದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು ಭಾಗವಹಿಸುತ್ತಿದ್ದಾರೆ. ಅದರಂತೆ, ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಅವರೂ ಪಾಲ್ಗೊಳ್ಳಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಅವರು ಕಾಶ್ಮೀರದ ಶ್ರೀನಗರಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ದೆಹಲಿಯಿಂದ ಕಾಶ್ಮೀರಕ್ಕೆ ವಿಮಾನ ಸಂಚಾರಗಳನ್ನು ರದ್ದುಪಡಿಸಲಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಈ ಪಾದ ಯಾತ್ರೆ ಸುಮಾರು 5 ತಿಂಗಳಿಂದ ನಡೆದಿತ್ತು. ದೇಶದುದ್ದಕ್ಕೂ ಸಂಚರಿಸಿದ ಭಾರತ್ ಯಾತ್ರೆ, ದೇಶವನ್ನು ಪ್ರೀತಿ, ವಿಶ್ವಾಸಗಳಿಂದ ಜೋಡಿಸುವ ಪ್ರಯತ್ನವಾಗಿ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಈ ಯಾತ್ರೆಯ ಹಿಂದೆ ರಾಜಕಾರಣ ಇಲ್ಲ ಎಂದು ಹೇಳಿತ್ತಾದರೂ, ಅಂತಿಮವಾಗಿ ರಾಹುಲ್ ಗಾಂಧಿ ಅವರಿಗೆ ನಾಯಕತ್ವದ ಇಮೇಜ್ ತಂದು ಕೊಡುವ ಪ್ರಯತ್ನ ಈ ಯಾತ್ರೆಯ ಹಿಂದೆ ಇದೆ ಎನ್ನಲಾಗುತ್ತಿದೆ.
ಶ್ರೀನಗರದಲ್ಲಿ ಸೋಮವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ಪಿಸಿಸಿ ಅಧ್ಯಕ್ಷರು, ಸಂಸದರು ಮತ್ತು ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಹವಾಮಾನ ವೈಪರೀತ್ಯವು ಕಾಂಗ್ರೆಸ್‌ನ ಉತ್ಸಾಹಕ್ಕೆ ಭಂಗ ತರುವ ಸಾಧ್ಯತೆ ಇದೆ.
ಇದನ್ನೂ ಓದಿ: Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು
21 ಪಕ್ಷಗಳಿಗೆ ಆಹ್ವಾನ
ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭದಲ್ಲ ಪಾಲ್ಗೊಳ್ಳಲು 21 ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಈ ಪೈಕಿ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ಆಹ್ವಾನವನ್ನು ತಿರಸ್ಕರಿಸಿವೆ. ಒಟ್ಟು 12 ಪಕ್ಷಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಜತೆಗೆ, ಉಳಿದ ರಾಜಕೀಯ ಪಕ್ಷಗಳ ಬೆಂಬಲಿಸಿ ಪತ್ರ ಬರೆದಿವೆ.