Site icon Vistara News

Ghulam Nabi Azad | ಇಂಥ ಹೊತ್ತಲ್ಲಿ ಗುಲಾಂ ನಬಿ ಪಕ್ಷ ಬಿಡಬಾರದಿತ್ತು ಎಂದ ಕಾಂಗ್ರೆಸ್ ನಾಯಕರು

Jairam Ramesh

ನವ ದೆಹಲಿ: ಜಿ 23 ಗುಂಪಿನ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad)​ ಕಾಂಗ್ರೆಸ್ ಬಿಟ್ಟಿದ್ದು ದುರದೃಷ್ಟಕರ ಮತ್ತು ವಿಷಾದನೀಯ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ಕೊಟ್ಟ ಆಜಾದ್​, 5 ಪುಟಗಳ ರಾಜೀನಾಮೆ ಪತ್ರ ಬರೆದು ಅದರಲ್ಲಿ ರಾಹುಲ್ ಗಾಂಧಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ, ಕಾಂಗ್ರೆಸ್​ನ ಪ್ರಭಾವ ಕುಗ್ಗುತ್ತಿರುವುದಕ್ಕೆ ರಾಹುಲ್​ ಗಾಂಧಿಯ ಅಪ್ರಬುದ್ಧತೆಯೇ ಕಾರಣ ಎಂದೂ ಆರೋಪಿಸಿದ್ದಾರೆ. ಹೀಗೆ ಅವರು ಗಾಂಧಿ ಕುಟುಂಬದ ವಿರುದ್ಧ ಟೀಕೆಗಳನ್ನು ಮಾಡಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಕಾಂಗ್ರೆಸ್​ ನಾಯಕರಾದ ಅಜಯ್ ಮಾಕೆನ್​ ಮತ್ತು ಜೈರಾಮ್​ ರಮೇಶ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

‘ಗುಲಾಂ ನಬಿ ಆಜಾದ್​ ಅವರು ಸೋನಿಯಾ ಗಾಂಧಿಗೆ ಬರೆದು, ಮಾಧ್ಯಮಗಳ ಎದುರು ಬಹಿರಂಗಪಡಿಸಿದ ಪತ್ರವನ್ನು ನಾವೂ ಓದಿದ್ದೇವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಇಡೀ ಪಕ್ಷ ಇಂದು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ, ಧ್ರುವೀಕರಣ ಮತ್ತಿತರ ವಿಷಯಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಸೆಪ್ಟೆಂಬರ್​ 4ರಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್​​ನಿಂದ Mehangai Par Halla Bol (ಬೆಲೆ ಏರಿಕೆ ವಿರುದ್ಧ ಜೋರಾಗಿ ಧ್ವನಿಯೆತ್ತಿ ಮಾತನಾಡಿ) ರ್ಯಾಲಿ ಹಮ್ಮಿಕೊಂಡಿದ್ದೇವೆ. ಅದರಲ್ಲಿ ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂಥ ಹೋರಾಟದ ಹೊತ್ತಲ್ಲಿ ಗುಲಾಂ ನಬಿ ಆಜಾದ್​ ಬಿಟ್ಟು ಹೋಗಿರುವುದು ನಿಜಕ್ಕೂ ಬೇಸರ ಮೂಡಿಸಿದೆ’ ಎಂದು ಜೈರಾಮ್​ ರಮೇಶ್​ ಹೇಳಿದ್ದಾರೆ.

ಸೆಪ್ಟೆಂಬರ್​ 7ರಂದು ಕನ್ಯಾಕುಮಾರಿಯಿಂದ ಭಾರತ್​ ಜೋಡೋ ಯಾತ್ರೆ ಪ್ರಾರಂಭವಾಗಲಿದೆ. ಇದೊಂದು 3500 ಕಿಮೀ ದೂರದ ನಡಿಗೆ. ಈ ಯಾತ್ರೆಯ ಬಗ್ಗೆ ದೇಶಾದ್ಯಂತ ಜನರಿಗೆ ತಿಳಿಸಲು 32 ಸುದ್ದಿಗೋಷ್ಠಿಗಳನ್ನು ನಡೆಸಬೇಕಿದ್ದು, ಅದರ ವೇಳಾಪಟ್ಟಿಯೂ ಸಿದ್ಧವಾಗಿದೆ. ಕಾಂಗ್ರೆಸ್​ನಲ್ಲಿರುವ ಪ್ರತಿ ಮುಖಂಡರು, ಕಾರ್ಯಕರ್ತರೂ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಆದರೆ ಇಂಥ ನಿರ್ಣಾಯಕ ಹೊತ್ತಲ್ಲಿ ಗುಲಾಂ ನಬಿ ಆಜಾದ್​ ಪಕ್ಷ ಬಿಟ್ಟಿದ್ದಲ್ಲದೆ, ಕಾಂಗ್ರೆಸ್​ ವಿರುದ್ಧ ಪತ್ರವನ್ನೂ ಬರೆದಿದ್ದಾರೆ. ಅದನ್ನು ನಾವು ಓದಬೇಕಾಗಿ ಬಂದಿದ್ದು ದುರದೃಷ್ಟ’ ಎಂದೂ ಜೈರಾಮ್ ರಮೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ: Ghulam Nabi Azad | ಕಾಂಗ್ರೆಸ್​ ಬಿಟ್ಟು ಜಮ್ಮು ಕಾಶ್ಮೀರಕ್ಕೆ ಹೊರಟ ಆಜಾದ್​; ಹೊಸ ಪಕ್ಷ ರಚನೆಯ ಘೋಷಣೆ

Exit mobile version