ನವ ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಜ್ಜಾಗಿರುವ ವಿಪಕ್ಷಗಳ ಒಕ್ಕೂಟವನ್ನು ಕಾಂಗ್ರೆಸ್ ಮುನ್ನಡೆಸಲಿದೆ. 137 ವರ್ಷ ಹಳೆಯದಾದ ನಮ್ಮ ಪಕ್ಷ ಈ ಬಗ್ಗೆ ಇನ್ನಿತರ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹೇಳಿದ್ದಾರೆ.
‘ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಈ ದೇಶವನ್ನು ಆಳಬಲ್ಲ ವ್ಯಕ್ತಿ ನಾನೊಬ್ಬನೇ’ ಎನ್ನುವ ಅರ್ಥದ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹಲವು ಬಾರಿ ಆಡಿದ್ದಾರೆ. ಪ್ರಜಾಪ್ರಭುತ್ವ ಆಡಳಿತ ಇರುವ ಯಾವುದೇ ದೇಶದ ನಾಯಕ ಇದನ್ನು ಹೇಳಲು ಸಾಧ್ಯವಿಲ್ಲ. ಅವರು ಪ್ರಜಾಪ್ರಭುತ್ವದ ಒಂದು ಭಾಗ, ನಿರಂಕುಶಾಧಿಕಾರಿಯಾಗಲೀ, ಸರ್ವಾಧಿಕಾರಿಯಾಗಲೀ ಅಲ್ಲ ಎಂಬುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ಜನರನ್ನು ನಿಮ್ಮನ್ನು ಆಯ್ಕೆ ಮಾಡಿದ್ದಾರೋ, ಅವರೇ ಪಾಠ ಕಲಿಸುತ್ತಾರೆ’ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ನಾಗಾಲ್ಯಾಂಡ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ: Congress President | ಅಧ್ಯಕ್ಷ ಸ್ಥಾನ ಚುನಾವಣೆಗೆ ಕೊನೇ ಕ್ಷಣದಲ್ಲಿ ಪ್ರವೇಶ ಮಾಡಿದ ಮಲ್ಲಿಕಾರ್ಜುನ್ ಖರ್ಗೆ?
2024ರಲ್ಲಿ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬರುತ್ತದೆ ಮತ್ತು ಅದನ್ನು ಕಾಂಗ್ರೆಸ್ ಮುನ್ನಡೆಸುತ್ತದೆ. ಈ ಬಗ್ಗೆ ನಾವು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಖಂಡಿತ ಬಹುಮತ ಇರುವುದಿಲ್ಲ. ಬೇಕಿದ್ದರೆ 100 ಮೋದಿಯರು, 100 ಅಮಿತ್ ಶಾಗಳು ಬರಲಿ’ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ. ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಸೋಮವಾರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಚಾರ ಸಭೆ ನಡೆಸಿದರು. ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.