Site icon Vistara News

Lok Sabha Election: ಕಾಂಗ್ರೆಸ್‌ಗೆ ಈ ಸಲ ಸಿಗೋದು ಬರೀ 37 ಸೀಟು; ಏನಿದು ಸಮೀಕ್ಷೆ?

Mallikarjun Kharge

Rahul Gandhi My Choice For PM, Priyanka Should Have Contested: Mallikarjun Kharge

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು (NDA Alliance) ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿದೆ. ಅತ್ತ, ಕಾಂಗ್ರೆಸ್‌ ನೇತೃತ್ವದಲ್ಲಿ ರಚನೆಯಾಗಿರುವ ಇಂಡಿಯಾ ಒಕ್ಕೂಟ (India Bloc) ಕೂಡ ತೀವ್ರ ಸ್ಪರ್ಧೆಯೊಡ್ಡಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ, ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷಾ ವರದಿ (India TV-CNX Opinion Poll) ಪ್ರಕಟವಾಗಿದ್ದು, ಕಾಂಗ್ರೆಸ್‌ ಕೇವಲ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.

ಫೆಬ್ರವರಿ 5ರಿಂದ 23ರ ಅವಧಿಯಲ್ಲಿ ದೇಶದ 543 ಲೋಕಸಭೆ ಕ್ಷೇತ್ರಗಳ 1.62 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಿ ವರದಿ ಪ್ರಕಟಿಸಲಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿಂದೆಂದೂ ಕಂಡಿರದ ಕಳಪೆ ಪ್ರದರ್ಶನ ನೀಡಲಿದೆ. ಕೇವಲ 37 ಸ್ಥಾನಗಳನ್ನು ಕಾಂಗ್ರೆಸ್‌ ಪಡೆಯಲಿದೆ. ಇನ್ನು, ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಒಟ್ಟು 98 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇತರೆ ಅಭ್ಯರ್ಥಿಗಳು 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಗೆ ನಲುಗಿದ್ದ ಕಾಂಗ್ರೆಸ್‌ 42 ಕ್ಷೇತ್ರಗಳಲ್ಲಿ ಮಾತ್ರ ಜಯ ಕಂಡಿತ್ತು. ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ 10 ಸ್ಥಾನ ಹೆಚ್ಚು ಗೆದ್ದ ಕಾಂಗ್ರೆಸ್‌, ಒಟ್ಟು 52 ಕ್ಷೇತ್ರಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿತ್ತು. ಆದರೆ, ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಸೇರಿ ಹಲವು ಬದಲಾವಣೆ, ರಣತಂತ್ರದ ಹೊರತಾಗಿಯೂ ಕಾಂಗ್ರೆಸ್‌ 37 ಸ್ಥಾನಗಳಿಗೆ ಕುಸಿಯಲಿದೆ ಎಂಬುದಾಗಿ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ

ಮೋದಿ ಹ್ಯಾಟ್ರಿಕ್‌ ಖಚಿತ

ನರೇಂದ್ರ ಮೋದಿ ಅವರು ಹ್ಯಾಟ್ರಿಕ್‌ ಬಾರಿಸುವುದು ಖಚಿತ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಈಗ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 378 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಬಿಜೆಪಿಯು 335 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಎಲ್ಲ ಸ್ಥಾನ ಗೆಲ್ಲುವ ಮೂಲಕ ಕ್ಲೀನ್‌ಸ್ವೀಪ್‌ ಮಾಡಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version