ಭೋಪಾಲ್: ಬರ್ತ್ಡೇ ಕೇಕ್ನ್ನು ಲಾಂಗ್ನಲ್ಲಿ ಕತ್ತರಿಸುವುದು, ಪಾರ್ಟಿ, ಮದುವೆ ಸಮಾರಂಭಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಮೋಜು-ಮಸ್ತಿ ಮಾಡುವವರು-ಇತ್ಯಾದಿ ಅವಿವೇಕತನದ ವರ್ತನೆಯನ್ನು ತೋರಿಸುವ ಪುಂಡರನ್ನು, ತಿಳಿವಳಿಕೆ ಕಡಿಮೆ ಇರುವವರನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಹೀಗೆ ಮಾಡುವವರಿಗೆ ಬೈದು, ಬುದ್ಧಿ ಹೇಳಬೇಕಾದವರೇ ಇಂಥ ಕೆಲಸ ಮಾಡಿದರೆ ಹೇಗೆ?
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಸುನೀಲ್ ಸರಫ್ ಈಗ ಅವಿವೇಕತನದಿಂದ ವರ್ತಿಸಿದ್ದಾರೆ. ಹೊಸ ವರ್ಷದ ಪಾರ್ಟಿ ದಿನ, ಸಂತೋಷದಲ್ಲಿ ಕುಣಿಯುತ್ತ ತಮ್ಮ ರಿವಾಲ್ವರ್ನ್ನು ಮೇಲೆತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ ಸುನೀಲ್ ಅವರ ಕೋಟ್ಮಾದಲ್ಲಿರುವ ನಿವಾಸದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಇಲ್ಲಿ ಸಂಗೀತ-ಕುಣಿತ ಜೋರಾಗಿಯೇ ಇತ್ತು. ಗಾಯಕನೊಬ್ಬ ‘ಮೈ ಹೂ ಡಾನ್’ ಹಿಂದಿ ಹಾಡು ಹಾಡುತ್ತಿದ್ದರೆ, ಅವರ ಸುತ್ತಲೂ ಹಲವರು ನಿಂತಿದ್ದರು. ಅಲ್ಲೇ ಶಾಸಕ ಸುನೀಲ್ ಕೂಡ ಇದ್ದರು. ಕೋಟ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ಅವರು ತಮ್ಮ ಹಿಂಬದಿಯ ಜೇಬಿನಿಂದ ರಿವಾಲ್ವರ್ ತೆಗೆದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಕಾಂಗ್ರೆಸ್ ಶಾಸಕನ ಈ ಪುಂಡಾಟವನ್ನು ನೋಡಿದ ಬೆನ್ನಲ್ಲೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಅನುಪ್ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಷ್ಟಲ್ಲದೆ, ಸ್ಥಳೀಯರಾದ ಭುನೇಶ್ವರ್ ಶುಕ್ಲಾ ಎಂಬುವರು ಕೋಟ್ಮಾ ಠಾಣೆಯಲ್ಲಿ ಸುನೀಲ್ ಸರಫ್ ವಿರುದ್ಧ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸುನೀಲ್ ಸರಫ್ ಕಳೆದ ಕೆಲವು ದಿನಗಳ ಹಿಂದೆ ರೈಲೊಂದರಲ್ಲಿ ಮಹಿಳೆಯ ಜತೆ ಅಸಭ್ಯವಾಗಿ, ದರ್ಪವಾಗಿ ವರ್ತಿಸಿದ್ದಾರೆ ಎಂಬ ಕಾರಣಕ್ಕೆ ವಿವಾದ ಸೃಷ್ಟಿಸಿದ್ದರು. ಇದೀಗ ರಿವಾಲ್ವರ್ನಿಂದ ಗುಂಡು ಹಾರಿಸಿ ವಿವಾದಕ್ಕೆ ಕಾರಣವಾಗಿದ್ದಾರೆ. ಅವರ ಬಳಿ ಇದ್ದ ರಿವಾಲ್ವರ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಸುನೀಲ್ ಸರಫ್, ‘ತಾನು ಹೊಡೆದಿದ್ದು ಗುಂಡನ್ನಲ್ಲ. ಪಟಾಕಿ ಹೊಡೆಯುವ ಪಿಸ್ತೂಲ್ ಅದು’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.