ಚಂಡೀಗಢ: ಹರಿಯಾಣದ ನುಹ್ ಜಿಲ್ಲೆಯಲ್ಲಿ ಜುಲೈ 31ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ. ನುಹ್ ಹಿಂಸಾಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಶೇರ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಇಂದು (ಸೆಪ್ಟೆಂಬರ್ 15) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹಿಂಸಾಚಾರ ನಡೆದ ದಿನ ಮಾಮನ್ ಖಾನ್ ಅವರು ನುಹ್‌ನಲ್ಲೇ ಇದ್ದರು. ಇವರು ಹಿಂಸಾಚಾರಕ್ಕೆ ಪ್ರಚೋದನೆ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಹಾಗಾಗಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲು ಮಾಡಿಕೊಂಡಿರುವ ಎಫ್‌ಐಆರ್‌ನಲ್ಲಿ ಮಾಮನ್ ಖಾನ್ ಹೆಸರೂ ಇದೆ. ಅಲ್ಲದೆ, ಇದಕ್ಕೂ ಮೊದಲು ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಮಾಮನ್ ಖಾನ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
Master Mind of #NuhViolence, Congress MLA Mamman Khan is arrested by Haryana police… pic.twitter.com/eZBgyuIBy0
— Arun Yadav🇮🇳 (@beingarun28) September 14, 2023
ಪೊಲೀಸರ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಇದೆ ಎಂಬುದು ಗೊತ್ತಾಗುತ್ತಲೇ ಬಂಧನದಿಂದ ರಕ್ಷಣೆ ಕೋರಿ ಮಾಮನ್ ಖಾನ್ ಅವರು ಪಂಜಾಬ್-ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಇವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 19ರಂದು ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ, ಮಾಮನ್ ಖಾನ್ ಅವರ ಪಿತೂರಿ ಕುರಿತು ಸಮರ್ಪಕ ದಾಖಲೆ ಇವೆ, ಫೋನ್ ಕರೆಗಳ ರೆಕಾರ್ಡಿಂಗ್ಸ್ ಇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ಬಳಿಕ ಅವರನ್ನು ಬಂಧಿಸಿದ್ದಾರೆ. ಮಾಮನ್ ಖಾನ್ ಫಿರೋಜ್‌ಪುರ ಝಿರ್ಕಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಇದನ್ನೂ ಓದಿ: Nuh Violence: ಹರಿಯಾಣ ಹಿಂಸೆ; ಸುದರ್ಶನ್ ನ್ಯೂಸ್ ಸಂಪಾದಕ ಮುಕೇಶ್ ಕುಮಾರ್ ಬಂಧನ, ವಿದೇಶಿ ನಂಟೇನು?
ಜುಲೈ 31ರಂದು ಹಿಂದುಗಳು ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಭುಗಿಲೆದ್ದ ಹಿಂಸಾಚಾರವು ಬೃಹತ್ ಗಲಭೆಯಾಗಿ ಮಾರ್ಪಟ್ಟು ಬೇರೆ ಜಿಲ್ಲೆಗಳಲ್ಲೂ ಹಿಂಸಾಚಾರ ನಡೆದಿತ್ತು. ಐವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಭಾಗಿಯಾದ 300ಕ್ಕೂ ಅಧಿಕ ಜನರ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ನೆಲಸಮಗೊಳಿಸಲಾಗಿದೆ. ಹಾಗೆಯೇ, 25 ರೋಹಿಂಗ್ಯಾ ಮುಸ್ಲಿಮರನ್ನೂ ಬಂಧಿಸಲಾಗಿದೆ. ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಹಿಂಸಾಚಾರದ ಕುರಿತು ನಕಲಿ ಸುದ್ದಿ ಹರಡಿದ ಆರೋಪದಲ್ಲಿ ಸುದರ್ಶನ್ ನ್ಯೂಸ್ ಚಾನೆಲ್ ರೆಸಿಡೆಂಟ್ ಎಡಿಟರ್ (ಸ್ಥಾನಿಕ ಸಂಪಾದಕ) ಮುಕೇಶ್ ಕುಮಾರ್ ಅವರನ್ನೂ ಬಂಧಿಸಲಾಗಿದೆ.