Site icon Vistara News

Rajendra Singh: ತಮ್ಮದೇ ಪಕ್ಷದ ಶಾಸಕ ವಿಧಾನಸಭೆ ಪ್ರವೇಶಿಸಲು ಬಿಡದ ಕಾಂಗ್ರೆಸ್‌ ನಾಯಕರು; ಬಿಕ್ಕಳಿಸಿ ಅತ್ತ ಲೀಡರ್

Rajasthan MLA Rajendra Singh Gudha

Congress MLA Rajendra Singh Gudha was not allowed to enter the Rajasthan Assembly

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ ಬಿಕ್ಕಟ್ಟು ಜಗಜ್ಜಾಹೀರಾಗುತ್ತಿದೆ. ತಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ರಾಜೇಂದ್ರ ಸಿಂಗ್‌ ಗುಢಾ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಈಗ ಇದೇ ಶಾಸಕ ರಾಜೇಂದ್ರ ಸಿಂಗ್‌ ಗುಢಾ (Rajendra Singh) ಅವರನ್ನು ವಿಧಾನಸಭೆ ಪ್ರವೇಶ ಮಾಡಲು ಬಿಟ್ಟಿಲ್ಲ. ಕಾಂಗ್ರೆಸ್‌ ಮುಖಂಡರು ತಮ್ಮದೇ ಪಕ್ಷದ ಶಾಸಕರೊಬ್ಬರನ್ನು ವಿಧಾನಸಭೆ ಪ್ರವೇಶಿಸಲು ಬಿಡದೆ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜೇಂದ್ರ ಸಿಂಗ್‌ ಗುಢಾ ಅವರು ಸೋಮವಾರ ವಿಧಾನಸಭೆಗೆ ತೆರಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ನಾಯಕರು ರಾಜೇಂದ್ರ ಸಿಂಗ್‌ ಗುಢಾ ಅವರನ್ನು ವಿಧಾನಸಭೆ ಪ್ರವೇಶಿಸಲು ಬಿಟ್ಟಿಲ್ಲ. ಕಾಂಗ್ರೆಸ್‌ ನಾಯಕರನ್ನು ಪಕ್ಕಕ್ಕೆ ಸರಿಸಿ ಹೋಗಲು ಎಷ್ಟು ಯತ್ನಿಸಿದರೂ ಗುಢಾ ಅವರು ವಿಧಾನಸಭೆ ಪ್ರವೇಶಿಸಲು ಆಗಿಲ್ಲ. ಕಾಂಗ್ರೆಸ್‌ ನಾಯಕರು ತಳ್ಳಾಟ ಮಾಡಿ ಕೊನೆಗೂ ಪ್ರವೇಶಿಸಲು ಬಿಟ್ಟಿಲ್ಲ. ಈ ವಿಡಿಯೊ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‌

ಗಳಗಳನೆ ಅತ್ತ ಗುಢಾ

ತಮ್ಮದೇ ಪಕ್ಷದ ನಾಯಕರು ವಿಧಾನಸಭೆ ಪ್ರವೇಶಿಸಲು ಬಿಡದ ಕಾರಣ ರಾಜೇಂದ್ರ ಸಿಂಗ್‌ ಗುಢಾ ಅವರು ಮಾಧ್ಯಮಗಳ ಎದುರೇ ಗಳಗಳನೆ ಅತ್ತರು. “ನನ್ನದೇ ಪಕ್ಷದ ನಾಯಕರು ನಾನು ವಿಧಾನಸಭೆ ಪ್ರವೇಶಿಸಲು ಬಿಟ್ಟಿಲ್ಲ. ನನಗೆ ಒದ್ದು, ಥಳಿಸಿ, ಹಲ್ಲೆ ನಡೆಸಿದರು. ನಾನು ಬಿಜೆಪಿ ಜತೆಗಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ನಾನು ವಿಧಾನಸಭೆ ಪ್ರವೇಶಿಸಲು ಬಿಡದಂತಹ ಯಾವ ತಪ್ಪು ಮಾಡಿದ್ದೇನೆ” ಎಂದು ಪ್ರಶ್ನಿಸಿದರು. ಇದೇ ವೇಳೆ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಇದನ್ನೂ ಓದಿ: Rajasthan Minister: ರಾಜ್ಯದಲ್ಲಿ ಸ್ತ್ರೀ ಸುರಕ್ಷತೆ ಇಲ್ಲ ಎಂದ ರಾಜಸ್ಥಾನ ಸಚಿವನ ವಜಾ; ಚುನಾವಣೆ ಮೊದಲೇ ‘ಕೈ’ ವಿಲವಿಲ

ಸಚಿವ ಗುಢಾ ಹೇಳಿದ್ದೇನು?

ರಾಜಸ್ಥಾನದ ವಿಧಾನಸಭೆ ಕಲಾಪದ ವೇಳೆ ಮಣಿಪುರ ಹಿಂಸಾಚಾರದ ವಿಷಯ ಪ್ರಸ್ತಾಪಿಸಲಾಯಿತು. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದನ್ನು ಖಂಡಿಸಲಾಯಿತು. ಇದೇ ವೇಳೆ ಮಾತನಾಡಿದ್ದ ಗುಢಾ, “ವಾಸ್ತವದಲ್ಲಿ ನಾವು ಕೂಡ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ವಿಫಲರಾಗಿದ್ದೇವೆ. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಜಾಸ್ತಿಯಾಗಿದೆ. ಮಣಿಪುರದ ಕುರಿತು ಮಾತನಾಡುವ ನಾವು ಇದರ ಕುರಿತು ಕೂಡ ಗಮನ ಹರಿಸಬೇಕು” ಎಂದು ಹೇಳಿದ್ದರು. ಇದಾದ ಬಳಿಕ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು.

Exit mobile version