Site icon Vistara News

Viral Video: ಕೇರಳದ ನೂತನ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಮೇಲೆ ಕಾಂಗ್ರೆಸ್​ ಸಂಸದನ ಫೋಟೋಗಳನ್ನು ಅಂಟಿಸಿದ ಕಾರ್ಯಕರ್ತರು

Congress MP V K Sreekandan Photo on Vande Bharat Express Train in Kerala

#image_title

ಕೇರಳದಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (PM Modi)ಯವರಿಂದ ಲೋಕಾರ್ಪಣೆಗೊಂಡ ನೂತನ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ(Vande Bharat Express) ಮೇಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಪಾಲಕ್ಕಾಡ್​ ಸಂಸದ ವಿ.ಕೆ.ಶ್ರೀಕಂದನ್​ ಅವರ ಫೋಟೋ ಇರುವ ಪೋಸ್ಟರ್​​ಗಳನ್ನು ಅಂಟಿಸಿದ್ದಾರೆ. ವಂದೇ ಭಾರತ್​ ಎಕ್ಸ್​ಪ್ರೆಸ್ ರೈಲು ಪಾಲಕ್ಕಾಡ್​​ನ ಶೋರಾನುರ್​ ಜಂಕ್ಷನ್​ ತಲುಪಿ, ನಿಲ್ದಾಣದಲ್ಲಿ ನಿಂತಿದ್ದಾಗ ಕಾರ್ಯಕರ್ತರು ಈ ಪುಂಡಾಟ ಮೆರೆದಿದ್ದಾರೆ. ರೈಲಿನ ಕಿಟಕಿ-ಬಾಗಿಲಿನ ಗಾಜುಗಳ ಮೇಲೆಲ್ಲ, ವಿ.ಕೆ.ಶ್ರೀಕಂದನ್​ ಫೋಟೋ ಮತ್ತು ಅವರನ್ನು ಹೊಗಳಿದ ಸಾಲುಗಳಿರುವ ಪೋಸ್ಟರ್​ನ್ನು ಅಂಟಿಸಿದ್ದಾರೆ. ಆ ಸ್ಟೇಶನ್​ ತುಂಬೆಲ್ಲ ಕಾರ್ಯಕರ್ತರು ಒಟ್ಟಾಗಿದ್ದರು. ಅನೇಕರು ಕೈಯಲ್ಲಿ ಸಂಸದನ ಫೋಟೋವನ್ನು ಹಿಡಿದುಕೊಂಡಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ವಂದೇ ಭಾರತ್​ ರೈಲಿನ ಮೇಲೆ ಸಂಸದನ ಚಿತ್ರ ಇರುವ ಪೋಸ್ಟರ್​ ಅಂಟಿಸಿದ್ದರ ಫೋಟೋವನ್ನು ಕೇರಳ ಬಿಜೆಪಿ ನಾಯಕ ಕೆ.ಸುರೇಂದ್ರನ್​ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ‘ಪಾಲಕ್ಕಾಡ್​​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಂದೇ ಭಾರತ್​ ರೈಲನ್ನು ವಿರೂಪಗೊಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕೆಟ್ಟ ನಡವಳಿಕೆ ಇದು. ಈ ಕ್ರಿಮಿನಲ್​ಗಳೆಲ್ಲರೂ ಕಿರೀಟಧಾರಿ ರಾಜಕುಮಾರನ ಅನುಯಾಯಿಗಳು. ನಾಚಿಕೆಯಾಗಬೇಕು ಇವರಿಗೆಲ್ಲ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ಶ್ರೀಕಂದನ್​ ಅವರು ತಮಗೂ-ಈ ಘಟನೆಗೂ ಏನೂ ಸಂಬಂಧವಿಲ್ಲ ಎಂದಿದ್ದಾರೆ. ರೈಲಿನ ಮೇಲೆ ನನ್ನ ಫೋಟೋ ಅಂಟಿಸಲು ನಾನ್ಯಾರಿಗೂ ಹೇಳಿಲ್ಲ ಎಂದಿದ್ದಾರೆ. ಹಾಗೇ, ಈ ವಿಚಾರ ಇಟ್ಟುಕೊಂಡು ಬಿಜೆಪಿ ವಿವಾದ ಸೃಷ್ಟಿಸಲು ಪ್ರಯತ್ನ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ. ಈ ಪ್ರಕರಣದ ಸಂಬಂಧ ರೈಲ್ವೆ ಪೊಲೀಸರು ಸುಮೊಟೊ ಕೇಸ್​ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್​ 25ರಂದು ಚಾಲನೆ ನೀಡಿದ್ದಾರೆ. ಈ ರೈಲು ತಿರುವನಂತಪುರಂನಿಂದ ಕಾಸರಗೋಡಿಗೆ 568 ಕಿಮೀ ದೂರ ಸಂಚಾರ ಮಾಡಲಿದೆ. ಈ ದೂರವನ್ನು ರೈಲು ಕೇವಲ 8 ತಾಸುಗಳಲ್ಲಿ ಕ್ರಮಿಸಲಿದೆ. ಮಾರ್ಗ ಮಧ್ಯೆ ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್​, ಪಾಲಕ್ಕಾಡ್​, ಪತನಂತಿಟ್ಟ, ಮಲಪ್ಪುರಂ, ಕೊಯಿಕ್ಕೋಡ್ ಮತ್ತು ಕಣ್ಣೂರ್ ಸೇರಿ ಒಟ್ಟು 14 ಜಿಲ್ಲೆಗಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಅಲ್ಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Video: ಕೇರಳ ರೋಡ್ ಶೋ ವೇಳೆ ಪ್ರಧಾನಿ ಮೋದಿಯತ್ತ ತೂರಿಬಂತು ಮೊಬೈಲ್; ಚುರುಕು ಕಣ್ಣಿನ ಎಸ್​ಪಿಜಿ ಕಮಾಂಡೋ​ ಮಾಡಿದ್ದೇನು?

Exit mobile version