Site icon Vistara News

ನನ್ನ ತಂದೆಗೆ ಕಾಂಗ್ರೆಸ್‌ ಬಿಟ್ಟಿಯಾಗಿ ಸ್ಥಾನಮಾನ ಕೊಟ್ಟಿಲ್ಲ; ಪ್ರಣಬ್‌ ಮುಖರ್ಜಿ ಪುತ್ರಿ ಕೆಂಡ

Why did Pranab's daughter Sharmishtha Mukherjee beg Rahul Gandhi to give justice?

ಜೈಪುರ: ರಾಜಸ್ಥಾನದ ಜೈಪುರದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಕಾಂಗ್ರೆಸ್‌ ನಾಯಕತ್ವ (Congress) ಕುರಿತು ಪ್ರಣಬ್‌ ಮುಖರ್ಜಿ (Pranab Mukherjee) ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಅವರು ನೀಡಿದ ಹೇಳಿಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ, “ನೆಹರು-ಗಾಂಧಿ ಕುಟುಂಬದ (Nehru-Gandhi Family) ಸಂಕೋಲೆಯಿಂದ ಕಾಂಗ್ರೆಸ್‌ ಹೊರಬರಬೇಕು” ಎಂಬುದಾಗಿ ಹೇಳಿರುವುದು ಚರ್ಚೆ ಹುಟ್ಟಿಸಿದೆ. ಇದರ ಬೆನ್ನಲ್ಲೇ, “ನನ್ನ ತಂದೆ ಪ್ರಣಬ್‌ ಮುಖರ್ಜಿ ಅವರಿಗೆ ಕಾಂಗ್ರೆಸ್‌ ಅಥವಾ ನೆಹರು-ಗಾಂಧಿ ಕುಟುಂಬವು ಬಿಟ್ಟಿಯಾಗಿ ಸ್ಥಾನಮಾನ ಕೊಟ್ಟಿಲ್ಲ” ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಜಯ್‌ ಶುಕ್ಲಾ ಅವರ ಪೋಸ್ಟ್‌ಗೆ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. “ಕಾಂಗ್ರೆಸ್‌ ಅಥವಾ ಗಾಂಧಿ-ನೆಹರು ಕುಟುಂಬವು ಬಿಟ್ಟಿಯಾಗಿ ನನ್ನ ತಂದೆಗೆ ಸ್ಥಾನಮಾನ ಕೊಟ್ಟಿಲ್ಲ. ನನ್ನ ತಂದೆಯು ಸ್ಥಾನಮಾನ ಹಾಗೂ ಗೌರವವನ್ನು ಗಳಿಸಿಕೊಂಡಿದ್ದರು. ಇನ್ನು, ಕಾಂಗ್ರೆಸ್‌ ಈಗ ಯಾವ ಸಿದ್ಧಾಂತವನ್ನು ಹೊಂದಿದೆ? ಚುನಾವಣೆಗೆ ಬಂದಾಗ ಶಿವಭಕ್ತರಾಗುವುದೇ ಕಾಂಗ್ರೆಸ್‌ ಸಿದ್ಧಾಂತವೇ” ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ನಾಯಕತ್ವ ಕುರಿತು ಶರ್ಮಿಷ್ಠಾ ಮುಖರ್ಜಿ ಅಭಿಪ್ರಾಯಕ್ಕೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅಜಯ್‌ ಶುಕ್ಲಾ ಪೋಸ್ಟ್‌ ಮಾಡಿದ್ದರು. “ಕಾಂಗ್ರೆಸ್‌ ಹಾಗೂ ಗಾಂಧಿ-ನೆಹರು ಕುಟುಂಬದ ಆಶೀರ್ವಾದದಿಂದಲೇ ನಿಮ್ಮ ತಂದೆ ಸೇರಿ ನಿಮ್ಮ ಇಡೀ ಕುಟುಂಬವು ಉತ್ತಮ ಸ್ಥಿತಿಯಲ್ಲಿದೆ. ಪ್ರಣಬ್‌ ಮುಖರ್ಜಿ ಹೆಸರಲ್ಲಿ ಚುನಾವಣೆಯಲ್ಲಿ ಹೋರಾಡಿದ ನಿಮ್ಮ ಸಹೋದರ ಗೆಲ್ಲಲು ಆಗಲಿಲ್ಲ. ಅಧಿಕಾರಕ್ಕಾಗಿ ನೀವು ಸಿದ್ಧಾಂತದಿಂದ ದೂರ ಸರಿಯುತ್ತಿದ್ದೀರಿ” ಎಂದಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಣಬ್‌ರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು!; ಶರ್ಮಿಷ್ಠಾ ಮುಖರ್ಜಿ

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಶರ್ಮಿಷ್ಠಾ ಮುಖರ್ಜಿ, “ನಾನೊಬ್ಬ ಕಾಂಗ್ರೆಸ್‌ ಬೆಂಬಲಿಗಳಾಗಿ, ದೇಶದ ಜವಾಬ್ದಾರಿಯುತ ನಾಗರಿಕಳಾಗಿ ಕಾಂಗ್ರೆಸ್‌ ಸ್ಥಿತಿಯ ಬಗ್ಗೆ ಮರುಕವಿದೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲನುಭವಿಸಿತು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿತು. ಯಾವುದೇ ಒಬ್ಬ ನಾಯಕನ ನೇತೃತ್ವದಲ್ಲಿ ಪಕ್ಷ ಸೋಲನುಭವಿಸಿದೆ ಎಂತಾದರೆ, ಆ ಪಕ್ಷದ ನಾಯಕತ್ವವನ್ನು ಬದಲಿಸಬೇಕು. ನೆಹರು-ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಹೊರಬರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಹಾಗಂತ ನಾನು ರಾಹುಲ್‌ ಗಾಂಧಿ ನಾಯಕತ್ವವನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಯಾರ ನಾಯಕತ್ವವನ್ನು ಕೂಡ ಒಮ್ಮೆಗೆ ವಿಶ್ಲೇಷಣೆ ಮಾಡಬಾರದು. ನನ್ನ ತಂದೆಯ ಬಗ್ಗೆ ಕೇಳಿದರೂ ನಾನು ಎಲ್ಲವನ್ನೂ ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ. ಆದರೆ, ಕಾಂಗ್ರೆಸ್‌ ಬೆಂಬಲಿಗಳಾಗಿ ನಾನು ಪಕ್ಷದ ಏಳಿಗೆ ಬಗ್ಗೆ ಕಾಳಜಿ ಹೊಂದಿದ್ದೇನೆ. ಹಾಗಾಗಿ, ನಾಯಕತ್ವ ಬದಲಾವಣೆ ಬಗ್ಗೆ ಪಕ್ಷವು ಆಸಕ್ತಿ ತೋರಿಸಬೇಕು. ನಾಯಕತ್ವ ಬದಲಾವಣೆಯಿಂದ ಪಕ್ಷದ ವರ್ಚಸ್ಸು ಬದಲಾಗಬಹುದು” ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version