Site icon Vistara News

Congress Party: ಪಕ್ಷದ ಬ್ಯಾಂಕ್ ಖಾತೆ ಸ್ಥಗಿತ; ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

Mallikarjun Kharge

We Don't Have Money To Spend: Says Mallikarjun Kharge Says Weeks Before Lok Sabha Election

ನವದೆಹಲಿ: ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷದ (Congress Party) ಬ್ಯಾಂಕ್ ಖಾತೆಗಳನ್ನು (Bank Accounts) ಕೆಲ ಕಾಲ ಸ್ಥಗಿತಗೊಳಿಸಿದ್ದು, ವಾದ ವಿವಾದಕ್ಕೆ ಕಾರಣವಾಗಿದೆ. ಯುವ ಕಾಂಗ್ರೆಸ್ ಸೇರಿದಂತೆ ಅದರ ಪ್ರಮುಖ ಬ್ಯಾಂಕ್ ಖಾತೆಗಳನ್ನು (Accounts Frozen) ಸ್ಥಗಿತಗೊಳಿಸಿದ ನಂತರ ಕೂಡಲೇ ಈ ಬಗ್ಗೆ ಪಕ್ಷವು ಆಕ್ಷೇಪಿಸಿತು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಮುಂದಿನ ವಾರದ ಅಂತಿಮ ವಿಚಾರಣೆಯವರೆಗೆ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಿತು.

ಬ್ಯಾಂಕ್ ಖಾತೆಗಳಲ್ಲಿ 115 ಕೋಟಿ ರೂ. ಕಡ್ಡಾಯವಾಗಿ ಇರಲೇಬೇಕು. ತೆರಿಗೆ ಇಲಾಖೆ ಅಧಿಕಾರಿಗಳ ನಿರ್ದೇಶನದ ಅನುಸರಣೆಯಲ್ಲಿ ಈ ಮೊತ್ತವನ್ನು ಬಳಸುವಂತಿಲ್ಲ. ಅದರ ಅರ್ಥ ಈ ಹಣದ ಬಳಕೆಯ ಮೇಲೆ ನಿರ್ಬಂಧ ಹೇರಿದಂತಾಗಿದೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ.

ಇದರರ್ಥ 115 ಕೋಟಿ ರೂಪಾಯಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಈ ₹115 ಕೋಟಿ ನಮ್ಮ ಚಾಲ್ತಿ ಖಾತೆಯಲ್ಲಿರುವುದಕ್ಕಿಂತ ಹೆಚ್ಚು ಎಂದು ಕಾಂಗ್ರೆಸ್ ಹೇಳಿದೆ. ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಖಜಾಂಚಿ ಅಜಯ್ ಮಾಕೆನ್ ಅವರು ಸರ್ಕಾರದ ಈ ನಡೆಯನ್ನು, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹಾಳು ಮಾಡುವುದಾಗಿದೆ ಎಂದು ಬಣ್ಣಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯು ಸಂಗ್ರಹಿಸಿರುವ 210 ಕೋಟಿ ರೂ. ತೆರಿಗೆ ಬೇಡಿಕೆಯಿಂದ ಈ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ, ಈ ಕ್ರಮವು ರಾಜಕೀಯ ಪ್ರೇರಿತ ಮತ್ತು ಪಕ್ಷದ ಚುನಾವಣಾ ಸಿದ್ಧತೆಗಳನ್ನು ಅಡ್ಡಿಪಡಿಸಲು ಕಾರ್ಯತಂತ್ರದ ಸಮಯವಾಗಿದೆ ಎಂದು ಕಾಂಗ್ರೆಸ್ ಹೇಳುತ್ತದೆ.

ಈ ತರಹ ಒಂದೇ ಪಕ್ಷದ ಆಡಳಿತದಿಂದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇರುವುದಿಲ್ಲ. ಪ್ರತಿಪಕ್ಷವನ್ನು ದಮನ ಮಾಡಲಾಗುತ್ತಿದೆ. ನಾವು ಕೋರ್ಟ್, ಮಾಧ್ಯಮ ಮತ್ತು ಜನರಿಂದ ಈ ಬಗ್ಗೆ ನ್ಯಾಯವನ್ನು ಕೋರುತ್ತವೆ ಎಂದು ಅಜಯ್ ಮಾಕೆನ್ ಅವರು ಹೇಳಿದ್ದಾರೆ.

ಪ್ರಸ್ತುತ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಂದಿರುವ ವಿಷಯದೊಂದಿಗೆ, ಖಾತೆ ಸ್ಥಗಿತ ಪ್ರತಿಕ್ರಿಯೆಯಾಗಿ ಪಕ್ಷವು ಕಾನೂನು ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಕೆನ್ ಅವರು ವಿಚಾರಣೆ ಬಾಕಿ ಇರುವ ಕಾರಣ ಮಾಹಿತಿಯನ್ನು ಮೊದಲೇ ಬಹಿರಂಗಪಡಿಸದಿರಲು ನಿರ್ಧರಿಸಿದ್ದಾರೆ ಎಂದು ವಿವರಿಸಿದರು.

ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರ ಬಗ್ಗೆ ನಿನ್ನೆಯಷ್ಟೇ ಕಾಂಗ್ರೆಸ್‌ಗೆ ಮಾಹಿತಿ ದೊರೆಯಿತು. ಪಕ್ಷದ ವಕೀಲ ವಿವೇಕ್ ಟಂಕಾ ಅವರು, ಒಟ್ಟು ನಾಲ್ಕು ಖಾತೆಗಳ ಮೇಲೆ ಪರಿಣಾಮ ಬೀರಿದೆ. ಪಕ್ಷ ನೀಡುವ ಚೆಕ್ ಸ್ವೀಕರಿಸದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು. ಸ್ಥಗಿತ ಮಾಡಲಾದ ನಿಧಿಯನ್ನು ತೆರಿಗೆ ಇಲಾಖೆಗೆ ಸಲ್ಲಿಸಲು ಸೂಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

2018-19ರ ಚುನಾವಣಾ ವರ್ಷದಲ್ಲಿ ಪಕ್ಷವು 45 ದಿನಗಳ ತಡವಾಗಿ ತನ್ನ ಖಾತೆಗಳ ವಿವರವನ್ನು ಸಲ್ಲಿಸಿದೆ. ಹಾಗಂತ ಖಾತೆಗಳನ್ನು ಸ್ಥಗಿತ ಮಾಡುವುದು ಮಾಡುವುದು ತೀವ್ರತರ ಕ್ರಮವಾಗಿದೆ. ಇಂಥ ಪ್ರಕರಣಗಳಲ್ಲಿ ಅತಿಯಾಗಿ ವರ್ತಿಸದ ಉದಾಹರಣೆಗಳು ಈ ಹಿಂದೆ ಇವೆ ಎಂದು ಮಾಕೆನ್ ಹೇಳಿದ್ದಾರೆ. ಮನಮೋಹನ್ ಸಿಂಗ್ ಕಮಿಟಿ ರಿಪೋರ್ಟ್ ಅನುಸಾರ ಯಾವ ಸಂಸದರು, ಶಾಸಕರು ದೇಣಿಗೆ ನೀಡಿದ್ದಾರೆಂಬ ಮಾಹಿತಿಯನ್ನ ನಾವು ನೀಡಿದ್ದೇವೆ ಎಂದು ಹೇಳಿದರು.

ಅಧಿಕಾರದ ಅಮಲಿನಲ್ಲಿದೆ ಮೋದಿ ಸರ್ಕಾರ- ಖರ್ಗೆ

ಅಧಿಕಾರದ ಅಮಲಿನಲ್ಲಿ ಮೋದಿ ಸರ್ಕಾರವು ಲೋಕಸಭೆ ಚುನಾವಣೆಗೆ ಮುನ್ನವೇ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಭಾರೀ ಹೊಡೆತ ನೀಡುವ ಕ್ರಮವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಅಸಾಂವಿಧಾನಿಕವಾಗಿ ಸಂಗ್ರಹಿಸಲಾಗಿರುವ ಹಣವನ್ನು ಬಿಜೆಪಿ ಚುನಾವಣೆಯಲ್ಲಿ ಬಳಸಲಿದೆ. ಆದರೆ, ನಾವು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಲಾದ ಹಣವನ್ನು ಜಪ್ತಿ ಮಾಡಲಾಗಿದೆ. ಇದಕ್ಕಾಗಿಯೇ ನಾವು ಹೇಳುತ್ತಿದ್ದೇವೆ, ದೇಶದಲ್ಲಿ ಭವಿಷ್ಯದಲ್ಲಿ ಚುನಾವಣೆಗಳೇ ಇರುವುದಿಲ್ಲ. ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವುದಕ್ಕಾಗಿ ಬಹುಪಕ್ಷ ಪದ್ಧತಿಯನ್ನು ಉಳಿಸುವಂತೆ ನಾವು ನ್ಯಾಯಾಂಗಕ್ಕೆ ಮನವಿ ಮಾಡುತ್ತೇವೆ. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ, ಜನರ ಮಧ್ಯೆ ತೆಗೆದುಕೊಂಡು ಹೋಗುತ್ತೇವೆ. ಸರ್ಕಾರದ ಈ ಅನ್ಯಾಯ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ :Congress Karnataka: ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಮತ್ತೊಂದು ಸರ್ವೆ!

Exit mobile version