Site icon Vistara News

ಎಂಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್‌ಗೆ ಸೂಚನೆ!

Kamal Nath

Congress Leader Kamal Nath Arrives In Delhi; May Join BJP Today?

ನವದೆಹಲಿ: ಗೆದ್ದೇ ಗೆಲ್ಲುತ್ತೇವೆ ಎಂಬ ಭಾರೀ ಆತ್ಮವಿಶ್ವಾಸವನ್ನು ಹೊಂದಿದ್ದ ಮಧ್ಯ ಪ್ರದೇಶದಲ್ಲಿ (Madhya Pradesh) ಕಾಂಗ್ರೆಸ್ ಪಕ್ಷಕ್ಕೆ ಭಾರತೀಯ ಜನತಾ ಪಾರ್ಟಿಯು (BJP Party) ಭಾರೀ ಹೊಡೆತವನ್ನು ನೀಡಿದೆ. ಅರ್ಥಾತ್, ಆಡಳಿತ ವಿರೋಧ ಅಲೆಯ ಮಧ್ಯೆಯೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಸೋಲು ಅನುಭವಿಸಿರುವ ಕಾಂಗ್ರೆಸ್ (Congress Party), ಮಧ್ಯಪ್ರದೇಶ ಕಾಂಗ್ರೆಸ್ ಘಟಕಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್ (Kamal Nath) ಅವರಿಗೆ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಮಲ್ ನಾಥ್ ಅವರು ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದರು.

ಹಲವು ಎಕ್ಸಿಟ್ ಪೋಲ್ಸ್‌ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತುರುಸಿನ ಸ್ಪರ್ಧೆಯನ್ನು ಊಹಿಸಿದ್ದವು. ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಿದ್ದವು. ಆದರೆ, ಭಾನುವಾರ ಪ್ರಕಟವಾದ ಚುನಾವಣಾ ಫಲಿತಾಂಶವು ಮಾತ್ರ ಉಲ್ಟಾ ಆಗಿತ್ತು. ಭಾರತೀಯ ಜನತಾ ಪಾರ್ಟಿಯು ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. 230 ಕ್ಷೇತ್ರಗಳಿರುವ ಮಧ್ಯ ಪ್ರದೇಶದಲ್ಲಿ ಬಿಜೆಪಿ 163 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಪಾಲಿಗೆ ಕೇವಲ 66 ಕ್ಷೇತ್ರಗಳು ದೊರೆತವು. ಈ ಹಿನ್ನೆಲೆಯಲ್ಲಿ ಸೋಲಿನ ಹೊಣೆಯನ್ನು ಹೊತ್ತು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಗೆದ್ದಿದ್ದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮಧ್ಯಪ್ರದೇಶ ಬಿಜೆಪಿ ಯಶಸ್ವಿಯಾಗಿದೆ. “ಮೋದಿ ಮನದಲ್ಲಿ ಮಧ್ಯಪ್ರದೇಶ, ಮಧ್ಯಪ್ರದೇಶದ ಮನದಲ್ಲಿ ಮೋದಿ” ಎಂದು ಬಿಜೆಪಿ ಪ್ರಚಾರ ಮಾಡಿತು. ಇನ್ನು ನರೇಂದ್ರ ಮೋದಿ ಅವರು 14 ರ‍್ಯಾಲಿಗಳನ್ನು ನಡೆಸಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.

ಮಧ್ಯಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳಿಗೆ ಮಾಸಿಕ 1 ಸಾವಿರ ರೂ. ಸಹಾಯ ಧನ ನೀಡುವುದೇ ಲಾಡ್ಲಿ ಬೆಹನಾ ಯೋಜನೆಯಾಗಿದೆ. ಕಾಂಗ್ರೆಸ್‌ ಉಚಿತ ಕೊಡುಗೆಗಳ ಘೋಷಣೆಯನ್ನು ಮೊದಲೇ ಅರಿತಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 2023ರ ಮಾರ್ಚ್‌ನಲ್ಲಿಯೇ ಲಾಡ್ಲಿ ಬೆಹನಾ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ತಂದು, ಬಡ ಹೆಣ್ಣುಮಕ್ಕಳ ಖಾತೆಗಳಿಗೆ ಮಾಸಿಕ 1 ಸಾವಿರ ರೂ. ಜಮೆ ಮಾಡಿಸಿದರು. ಆ ಮೂಲಕ ಸರ್ಕಾರವು ಮಹಿಳೆಯರ ಪರ ಇದೆ ಎಂಬ ಸಂದೇಶ ರವಾನಿಸಿದರು.

ಮಧ್ಯಪ್ರದೇಶದಲ್ಲಿ ಡಬಲ್‌ ಎಂಜಿನ್‌ ಸರ್ಕಾರವು ಅಭಿವೃದ್ಧಿಗೆ ಕಾರಣವಾಗಿದೆ ಎಂದು ಬಿಜೆಪಿಯು ಪ್ರಚಾರದ ವೇಳೆ ಪ್ರಬಲವಾಗಿ ಜನರಿಗೆ ಮನವರಿಕೆ ಮಾಡಿದ್ದು ಕೂಡ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಅನುದಾನ, ರಾಜ್ಯ ಸರ್ಕಾರದ ಅಭಿವೃದ್ಧಿ ಪರ ಆಡಳಿತದಿಂದ ಮಧ್ಯಪ್ರದೇಶ ಏಳಿಗೆ ಹೊಂದುತ್ತಿದೆ ಎಂದು ಬಿಜೆಪಿಯು ಪ್ರಚಾರ ಮಾಡಿದ್ದು ಸಹಕಾರಿಯಾಗಿದೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿಯಂತೆ ಉತ್ತಮವಾಗಿ ಪ್ರಚಾರ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಯಿತು. ಸಾಮಾಜಿಕ ಜಾಲತಾಣಗಳನ್ನೂ ಕಾಂಗ್ರೆಸ್‌ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಇನ್ನು ಬಿಜೆಪಿಯಂತೆ ಪ್ರಮುಖ ನಾಯಕರನ್ನು ಕರೆಸಿ ರ‍್ಯಾಲಿಗಳನ್ನು ಆಯೋಜಿಸದೆ ಇರುವುದು, ಕೊನೆಯ ಕ್ಷಣದಲ್ಲ ಪ್ರಚಾರ ಕೈಗೊಂಡಿದ್ದು, ಗ್ಯಾರಂಟಿ ಭರವಸೆಗಳನ್ನು ಜನರಿಗೆ ತಲುಪಿಸುವಲ್ಲಿ ಹಿನ್ನಡೆ ಅನುಭವಿಸಿದ್ದು ಬಿಜೆಪಿಗೆ ವರದಾನವಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅಮಿತ್‌ ಶಾ ರೂಪಿಸಿದ ರಣತಂತ್ರವೂ ಗೆಲುವಿಗೆ ಕಾರಣವಾಗಿದೆ. 2022ರ ಮಧ್ಯ ಭಾಗದಿಂದಲೇ ರಾಜ್ಯದಲ್ಲಿ ಬಿಜೆಪಿಯು ಚುನಾವಣೆ ಸಿದ್ಧತೆ ನಡೆಸಿತು. ಅಮಿತ್‌ ಶಾ ಅವರು ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸಭೆ ನಡೆಸಿ ಅವರನ್ನು ಹುರಿದುಂಬಿಸಿದರು. ಪ್ರಚಾರ ಕಾರ್ಯಕ್ಕೆ ಕ್ರಿಯಾಯೋಜನೆ ರೂಪಿಸಿಕೊಟ್ಟರು. ಇದರ ಫಲಿತಾಂಶ ಈಗ ಕಣ್ಣಮುಂದಿದೆ.

ಈ ಸುದ್ದಿಯನ್ನೂ ಓದಿ: Mizoram Election Results: ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ

Exit mobile version