ರಾಂಚಿ: ಕಾಂಗ್ರೆಸ್ ಪಕ್ಷದ (Congress Party) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದ ಬ್ರಾಹ್ಮಣ ಮತ್ತು ಒಬಿಸಿ ವರ್ಗದ ನಾಯಕರನ್ನು ಕೈ ಬಿಟ್ಟು ಮುಸ್ಲಿಮ್ ಮತ್ತು ದಲಿತರನ್ನು ನೇಮಕ ಮಾಡಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಜಿಲ್ಲಾಧ್ಯಕ್ಷ ನೇಮಕಾತಿ ವೇಳೆ, ಮುಸ್ಲಿಮ್ ಮತ್ತು ದಲಿತರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ನಾಲ್ವರು ಬ್ರಾಹ್ಮಣ ಮತ್ತು ಒಬಿಸಿ ಜಿಲ್ಲಾಧ್ಯಕ್ಷರನ್ನು ಕೈಬಿಡಲಾಗಿದೆ.
ಪರಿಷ್ಕೃತ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿದ್ದು, ರಾಮಗಢ ಜಿಲ್ಲಾಧ್ಯಕ್ಷ ಶಂತಾನು ಮಿಶ್ರಾ ಅವರ ಬದಲಿಗೆ ಮುನ್ನಾ ಪಾಸ್ವಾನ್, ಗರ್ಹವಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶ್ರೀಕಾಂತ್ ತಿವಾರಿ ಬದಲಿಗೆ ಒಬೆದುಲ್ಲಾ ಹಕ್ ಅನ್ಸಾರಿ, ಸಾಹಿಬ್‌ಗಂಜ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅನಿಲ್ ಕುಮಾರ್ ಓಝಾ ಬದಲಿಗೆ ಬರ್ಕತ್ತುಲ್ಲಾ ಖಾನ್, ಕೊಡೇರ್ಮಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಬಿಸಿಯ ನಾರಾಯಣ ಬರ್ನವಾಲ್ ಅವರ ಬದಲಿಗೆ ಭೈರಾತ್ ಪಾಸ್ವಾನ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧ್ಯಕ್ಷ ಸ್ಥಾನದಿಂದ ಕೈ ಬಿಟ್ಟಿರುವ ನಾಯಕರಿಗೆ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಲು ಕಾಂಗ್ರೆಸ್ ಮುಂದಾಗಿದೆ. ಜಾರ್ಖಂಡ್‌ನ ವಿವಿಧ ಜಿಲ್ಲಾಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿತ್ತು. ಆದರೆ, ಈ ನೇಮಕಾತಿಯಿಂದ ಅಸಮಾಧಾನ ಭುಗಿಲೆದ್ದು ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ | Gharwapsi politics | ಖರ್ಗೆ ಭೇಟಿ ಮಾಡಿದ ವಿಶ್ವನಾಥ್ ಕಾಂಗ್ರೆಸ್ ಸೇರ್ತಾರಾ? ಹಳ್ಳಿ ಹಕ್ಕಿ ಹೇಳಿದ್ದೇನು?