Site icon Vistara News

Narendra Modi : ಬುಡಕಟ್ಟು ಸಮುದಾಯಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದು ಮೋದಿ ಹೇಳಿದ್ದು ಯಾಕೆ?

Narendra Modi

ನವದೆಹಲಿ: ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಗೆ ಕಾಂಗ್ರೆಸ್​ ಪಕ್ಷ ಎಂದಿಗೂ ಸಮಾನಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಹೇಳಿದ್ದಾರೆ. ಆ ಪಕ್ಷವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ಸದಾ ಮುಳುಗಿರುತ್ತದೆ ಎಂಬುದಾಗಿ ಆರೋಪಿಸಿದ್ದಾರೆ. ಛತ್ತೀಸ್​ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿದೆ ಎಂದು ಆರೋಪಿಸಿದರು. ರಾಜ್ಯವನ್ನು ಲೂಟಿ ಮಾಡಿದವರನ್ನು ಬಿಜೆಪಿ ಎಂದೆಂದಿಗೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಛತ್ತೀಸ್​ಗಢದ ಯುವಕರಿಗೆ ಕಾಂಗ್ರೆಸ್ ದೊಡ್ಡ ದ್ರೋಹ ಬಗೆದಿದೆ. ಅವರು (ಕಾಂಗ್ರೆಸ್) ತಮ್ಮ ಭರವಸೆಗಳನ್ನು ಈಡೇರಿಸಲಿಲ್ಲ. ವಿರುದ್ಧವಾಗಿ ನೇಮಕಾತಿಯಲ್ಲಿ (ಸರ್ಕಾರಿ ಉದ್ಯೋಗಗಳಿಗೆ) ಭ್ರಷ್ಟಾಚಾರ ಮಾಡಿದರು. ರಾಜ್ಯದ ನೇಮಕ ಇಲಾಖೆಯನ್ನು ಕಾಂಗ್ರೆಸ್ ಸಮಿತಿಯ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅವರ ಮಕ್ಕಳು ಮತ್ತು ಸಂಬಂಧಿಕರನ್ನು ನೇಮಕ ಮಾಡಿಕೊಂಡಿದ ಎಂದು ಮೋದಿ ಹೇಳಿದರು.

ಬುಡಕಟ್ಟು ಸಮುದಾಯಕ್ಕೆ ಅಪಮಾನ

ದೇಶದ ಮೊದಲ ಬುಡಕಟ್ಟು ಸಮುದಾಯಕ್ಕೆ ಸೇರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಮೋದಿ ಆರೋಪಿಸಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬುಡಕಟ್ಟು ಕುಟುಂಬದ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಬಿಜೆಪಿ ನಿರ್ಧರಿಸಿತು. ಆದರೆ ಕಾಂಗ್ರೆಸ್ ಅದನ್ನು ಕೂಡ ವಿರೋಧಿಸಿತ್ತು ಎಂದು ಮೋದಿ ಸ್ಮರಿಸಿಕೊಂಡರು.

“ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಪ್ರತಿಪಕ್ಷಗಳು ಬಿಜೆಪಿ ವಿರುದ್ಧವಾಗಿರಲಿಲ್ಲ, ಅವರು ಬುಡಕಟ್ಟು ಸಮುದಾಯದ ಮಗಳ ವಿರುದ್ಧವಾಗಿತ್ತು. ಛತ್ತೀಸ್​ಗಢದ ಪ್ರತಿಯೊಬ್ಬ ಬುಡಕಟ್ಟು ಜನಾಂಗದವರು ತಮ್ಮ ಸಮುದಾಯದ ಹೆಣ್ಣೊಬ್ಬಳಿಗೆ ಆಗಿರುವ ಅಪಮಾನಕ್ಕೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕು” ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ : India Bloc : ಇಂಡಿಯಾ ಬ್ಲಾಕ್ ವೇಸ್ಟ್​​ ಎಂದ ಬಿಹಾರದ ಸಿಎಂ ನಿತೀಶ್​ ಕುಮಾರ್​

ಕಾಂಗ್ರೆಸ್ ನಾಯಕರು ಪ್ರತಿ ಹಂತದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಮೋದಿ, ಛತ್ತೀಸ್​ಗಢದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅದರ ನಾಯಕರ ಬಂಗಲೆಗಳು ಮತ್ತು ಕಾರುಗಳ ಸಂಖ್ಯೆ ಹೆಚ್ಚಾಗಿದೆ. ಅವರ ಮಕ್ಕಳು ಮತ್ತು ಸಂಬಂಧಿಕರು ಮಾತ್ರ ಪ್ರಯೋಜನ ಪಡೆದಿದ್ದಾರೆಯೇ ಹೊರತು ಬಡವರಲ್ಲ ಎಂದು ಪ್ರಧಾನಿ ಹೇಳಿದರು. ಕಾಂಗ್ರೆಸ್ ಇರುವಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ನುಡಿದರು.

ಛತ್ತೀಸ್​ಗಢವನ್ನು ನಂಬರ್​ ಒನ್ ಮಾಡುತ್ತೇವೆ

ಛತ್ತೀಸ್​ಗಢವನ್ನು ದೇಶದ ಅಗ್ರ ರಾಜ್ಯಗಳಲ್ಲಿ ಒಂದಕ್ಕೆ ತರುವುದು ನಮ್ಮ ಗುರಿ. ಬಡವರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದವರ ಹಿತಾಸಕ್ತಿಗಳನ್ನು ರಕ್ಷಿಸುವುದೇ ಬಿಜೆಪಿಯ ನಿರ್ಣಯವಾಗಿದೆ ಎಂದು ಮೋದಿ ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತಕ್ಕೆ ಛತ್ತೀಸ್ ಗಢದ ತ್ವರಿತ ಅಭಿವೃದ್ಧಿ ಅತ್ಯಗತ್ಯ. ಮುಂದಿನ ಐದು ವರ್ಷಗಳಲ್ಲಿ ನಾವು ಸಮೃದ್ಧ ಛತ್ತೀಸ್​ಗಢದ ಅಡಿಪಾಯವನ್ನು ಬಲಪಡಿಸಬೇಕಾಗಿದೆ” ಎಂದು ಮೋದಿ ಹೇಳಿದರು. 90 ಸದಸ್ಯರ ರಾಜ್ಯ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಮಾವೋವಾದಿ ಪೀಡಿತ ಬಸ್ತಾರ್ ವಿಭಾಗದ ಏಳು ಜಿಲ್ಲೆಗಳು ಮತ್ತು ರಾಜನಂದಗಾಂವ್, ಮೊಹ್ಲಾ-ಮನ್ಪುರ್-ಅಂಬಾಘರ್ ಚೌಕಿ, ಕಬೀರ್ಧಾಮ್ ಮತ್ತು ಖೈರಾಘರ್-ಚುಯಿಖಾದನ್-ಗಂಡೈ ಜಿಲ್ಲೆಗಳ 20 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಉಳಿದ 70 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಕಾಂಗ್ರೆಸ್​ ತಿರುಗೇಟು

ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಆರ್.ಪಿ.ಸಿಂಗ್, ಛತ್ತೀಸ್​ಗಢ ಜನರಿಗೆ ನೀಡಲು ಬಿಜೆಪಿ ಬಳಿ ಏನೂ ಇಲ್ಲ, ಆದ್ದರಿಂದ ಅವರು ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟಾಚಾರಿಗಳು ಎಂದು ದೂಷಿಸುತ್ತಿದ್ದಾರೆ ಮತ್ತು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

“ಇಲ್ಲಿಯವರೆಗೆ, ಛತ್ತೀಸ್​ಗಢಕ್ಕೆ ಬಿಜೆಪಿ ಏನನ್ನೂ ನೀಡಿಲ್ಲ. ಪ್ರಧಾನಿ ಸ್ವತಃ ಏನನ್ನೂ ಘೋಷಿಸಿಲ್ಲ, ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿದೆ. ಅವರು ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಸಿಂಗ್ ಹೇಳಿದರು.

Exit mobile version