ನವದೆಹಲಿ: ಚುನಾವಣೆಯಿಂದ ಚುನಾವಣೆಗೆ ಕೆಳಮುಖವಾಗಿಯೇ ಚಲಿಸುತ್ತಿರುವ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ 2024ರಲ್ಲಿ ಪುನರುಜ್ಜೀವನಗೊಳ್ಳುವ ಸಲುವಾಗಿ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು, ಉನ್ನತಾಧಿಕಾರ ಕ್ರಿಯಾ ಸಮಿತಿ-2024″ ರಚನೆ ಮಾಡಲಿದೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೀಡಿದ್ದ ಪ್ರಸ್ತಾವನೆಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಸುದೀರ್ಘ ಎರಡು ಗಂಟೆ ಸಭೆ ನಡೆಸಲಾಯಿತು. ಪ್ರಶಾಂತ್ ಕಿಶೋರ್ ನೀಡಿರುವ ಪ್ರಸ್ತಾವನೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಹಿರಿಯ ಕಾಂಗ್ರೆಸಿಗ ಪಿ. ಚಿದಂಬರಂ ಅಧ್ಯಕ್ಷತೆಯ 8 ಜನರ ಸಮಿತಿ ಏಪ್ರಿಲ್ 21ರಂದು ವರದಿ ಸಲ್ಲಿಸಿತ್ತು. ಈ ಸಮಿತಿ ಸದಸ್ಯರನ್ನೂ ಒಳಗೊಂಡು ಸಭೆ ನಡೆಯಿತು. ಸಭೆಯಲ್ಲಿ ಪ್ರಿಯಾಂಕಾಗಾಂಧಿ ವಾದ್ರಾ ಹಾಗೂ ಅಂಬಿಕಾ ಸೋನಿ ಸಹ ಉಪಸ್ಥಿತರಿದ್ದರು.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಕ್ತಾರ ರಣದೀಪ್‌ಸಿಂಗ್ ಸುರ್ಜೇವಾಲಾ, ವರದಿ ನೀಡಿದ ಸಮಿತಿಯೊಂದಿಗೆ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ, ಉನ್ನತಾಧಿಕಾರ ಕ್ರಿಯಾ ಸಮಿತಿ-2024 ರಚಿಸಲು ಕಾಂಗ್ರೆಸ್ ಅಧ್ಯಕ್ಷರು ತೀರ್ಮಾನಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯನ್ನು ಕಣ್ಣಮುಂದಿರಿಸಿಕೊಂಡು ಸಂಘಟನಾತ್ಮಕ ಹಾಗೂ ರಾಜನೀತಿಕ ಸವಾಲುಗಳನ್ನು ಎದುರಿಸಲು ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಪ್ರಶಾಂತ್ ಕಿಶೋರ್ ಅವರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ಸುರ್ಜೇವಾಲಾ ನೀಡಲಿಲ್ಲ. ಸಮಿತಿಯ ಸದಸ್ಯರು ಯಾರು ಎನ್ನುವುದನ್ನು ಕಾಂಗ್ರೆಸ್ ಅಧ್ಯಕ್ಷರು ಸದ್ಯದಲ್ಲೆ ತೀರ್ಮಾನಿಸುತ್ತಾರೆ. ಈ ಕುರಿತು ಈಗಲೇ ಹೇಳಲು ಆಗುವುದಿಲ್ಲ ಎಂದು ಕುತೂಹಲವನ್ನು ಹಾಗೆಯೇ ಉಳಿಸಿದರು. ಮೂಲಗಳ ಪ್ರಕಾರ, ಸಮಿತಿ ಸದಸ್ಯರಲ್ಲಿ ಪ್ರಶಾಂತ್ ಕಿಶೋರ್ ಕುರಿತು ಭಿನ್ನ ಅಭಿಪ್ರಾಯಗಳಿವೆ. ಕೆಲವರು ಪ್ರಶಾಂತ್ ಕಿಶೋರ್ ಸೇರ್ಪಡೆ ಒಳ್ಳೆಯದು ಎಂದರೆ, ಕೆಲವರು ಇದು ಅನವಶ್ಯಕ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಈ ಕುರಿತ ನಿರ್ಧಾರವನ್ನು ಸೋನಿಯಾಗಾಂಧಿ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಾಟಿದಾರ್ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ
ನವಸಂಕಲ್ಪ ಚಿಂತನ ಶಿಬಿರ
ಲೋಕಸಭಾ ಚುನಾವಣೆ ಸಲುವಾಗಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ನವಸಂಕಲ್ಪ ಚಿಂತನ ಶಿಬಿರವನ್ನು ಆಯೋಜಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು ಎಂದು ಸುರ್ಜೇವಾಲ ತಿಳಿಸಿದ್ದಾರೆ.
ಮೇ 13ರಿಂದ 15ರವರೆಗೆ ಮೂರು ದನಗಳು ಈ ಶಿಬಿರ ನಡೆಯಲಿದೆ. ದೇಶದೆಲ್ಲೆಡೆಯಿಂದ 400ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ನಾಯಕರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನವಸಂಕಲ್ಪ ಶಿಬಿರದಲ್ಲಿ ರಾಜನೀತಿಕ, ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳ ಚರ್ಚೆ ಆಗುತ್ತದೆ. ಸಮಾಜದಲ್ಲಿ ವಿಭಿನ್ನ ವರ್ಗಗಳಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚೆ ನಡೆಯುತ್ತದೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರೈತರು, ವಿದ್ಯಾರ್ಥಿಗಳು, ಯುವಕರ ಕುರಿತು, ಅವರ ಅಧಿಕಾರಗಳ ಮೇಲೆ ಆಗುತ್ತಿರುವ ಆಘಾತವನ್ನು ಈ ಶಿಬಿರದಲ್ಲಿ ಚಿಂತನೆ ಮಾಡಲಾಗುತ್ತದೆ. ಇದರ ಜತೆಗೆ ಸಂಘಟನೆಯನ್ನು ಸದೃಢಗೊಳಿಸಲು ಸಂವಾದ ನಡೆಯುತ್ತದೆ. ಇದೆಲ್ಲ ವಿಚಾರಗಳಲ್ಲಿ ಆಳವಾದ ಚಿಂತನೆ ನಡೆಯುತ್ತದೆ. 2024ರ ಲೋಕಸಭೆ ಚುನಾವಣೆ ರಣತಂತ್ರದ ಕುರಿತೂ ಈ ಶಿಬಿರದಲ್ಲಿ ಚಿಂತನೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.