Site icon Vistara News

Congress President | ಕೈಗೊಂಬೆ ಅಧ್ಯಕ್ಷರಿಂದ ಕಾಂಗ್ರೆಸ್ ಉಳಿಯಲ್ಲ, ಭಿನ್ನರಾಗ ಹಾಡಿದ ‘ಮಹಾ’ ಮಾಜಿ ಸಿಎಂ

Prithviraj Chavan

ನವ ದೆಹಲಿ: ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಚುನಾವಣಾ ದಿನಾಂಕ ಗೊತ್ತು ಮಾಡಿದ ಹೊತ್ತಿನಲ್ಲಿ ‘ಜಿ23’ ಬಂಡಾಯ ಗುಂಪಿನ ಮತ್ತೊಬ್ಬ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಭಿನ್ನರಾಗ ಹಾಡಿದ್ದಾರೆ. ‘ಕೈಗೊಂಬೆ ಅಧ್ಯಕ್ಷ’ರಿಂದ ಕಾಂಗ್ರೆಸ್ ಪಕ್ಷವು ಉಳಿಯಲಾರದು. ಬ್ಯಾಕ್ ಸೀಟ್ ಡ್ರೈವಿಂಗ್‌‌ನಿಂದ ಕೆಲಸವಾಗುವುದಿಲ್ಲ. ಚುನಾವಣೆ ನಡೆಸುವುದಾದರೆ ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಅಷ್ಟೇ ಏಕೆ? ಕಾಂಗ್ರೆಸ್ ಕಾರ್ಯಕಾರಿಣಿಗೂ ಎಲೆಕ್ಷನ್ ಮೂಲಕವೇ ಆಯ್ಕೆ ಮಾಡಿ ಎಂದು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.

ಇದೇ ವೇಳೆ, ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿರುವುದು ದುರದೃಷ್ಟಕರ ಎಂದು ಚವಾಣ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯಲಿವೆ. ಜಮ್ಮು ಕಾಶ್ಮೀರದಲ್ಲಿ ಕಿರಿಯ ಹಾಗೂ ಹೊರಗಿನ(ತಾರಿಖ್ ಹಮೀದ್ ಕರ್ರಾ)ವರನ್ನು ರಾಜಕೀಯ ವ್ಯವಹಾರಗಳ ಸಮಿತಿಗೆ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಈ ಸಮಿತಿಗೆ ಆಜಾದ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದಕ್ಕೇನು ಕಾರಣ? ಈ ಬಗ್ಗೆ ಚರ್ಚಿಸಲಾಗಿತ್ತೆ, ಬಹುಶಃ ಇದರಿಂದ ನೊಂದೇ ಆಜಾದ್ ರಾಜೀನಾಮೆ ನೀಡಿರಬಹುದು ಎಂದು ವಿಶ್ಲೇಷಣೆ ಮಾಡಿದ್ದಾರೆ ಚವಾಣ್.

ಸೋನಿಯಾ ಗಾಂಧಿ ಪ್ರಯತ್ನಿಸಿದ್ದರು
ಚುನಾವಣಾ ಪ್ರಚಾರ ಸಮಿತಿಯಲ್ಲಿ ಹಿರಿಯರಾದ ಗುಲಾಮ್ ನಬಿ ಆಜಾದ್ ಮತ್ತು ಆನಂದ ಶರ್ಮಾ ಅವರಂಥ ನಾಯಕರನ್ನು ಸೇರಿಸಲು ಸೋನಿಯಾ ಗಾಂಧಿ ಅವರು ಪ್ರಯತ್ನಿಸಿದ್ದರು. ಅವರಿಗೂ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಕೆಳಗಿರುವ ಜನರು ಆಜಾದ್ ಅವರನ್ನು ಭಿನ್ನಮತೀಯ ಎಂದು ಕರೆದು ಅವಕಾಶವನ್ನು ತಪ್ಪಿಸಿದರು. ಸೋನಿಯಾ ಅವರ ಮಾತನ್ನೂ ಕೇಳಲಿಲ್ಲ ಎಂದು ಚವಾಣ್ ತಿಳಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಆಜಾದ್ ಅವರು ರಾಹುಲ್ ಗಾಂಧಿ ವಿರುದ್ಧ ಕೆಲವು ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಆ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಇದಕ್ಕೂ ಮೊದಲು 2020ರ ಆಗಸ್ಟ್‌ನಲ್ಲಿ ಬರೆದ ಪತ್ರದಲ್ಲಿರುವ ಸಂಗತಿಗಳು ಸತ್ಯಾಂಶದಿಂದ ಕೂಡಿವೆ. ಅದನ್ನು ಈಗಲೂ ಬೆಂಬಲಿಸುತ್ತೇವೆ ಎಂದು ಚವಾಣ್ ತಿಳಿಸಿದ್ದಾರೆ.

ರಾಹುಲ್ ಅವರನ್ನು ಬಿಟ್ ಬಿಡಿ
ಒಂದು ವೇಳೆ, ರಾಹುಲ್ ಗಾಂಧಿ ಅವರಾಗಲೀ ಅಥವಾ ಅವರ ಕುಟುಂಬದವರಾಗಲಿ ಕಾಂಗ್ರೆಸ್ ಅಧ್ಯಕ್ಷರಾಗಲು ಸಿದ್ಧ ಇಲ್ಲ ಎನ್ನುವುದಾದರೆ ಅವರನ್ನು ಬಿಟ್ಟು ಬಿಡಿ. ಒಂದು ವೇಳೆ ಅವರು ಪರ್ಯಾಯ ವ್ಯವಸ್ಥೆ ಮಾಡದಿದ್ದರೆ, ಚುನಾವಣೆ ನಡೆಯಲಿ. ಹೊಸ ಅಧ್ಯಕ್ಷರು ಆಯ್ಕೆಯಾಗಲಿ ಎನ್ನುವ ಮೂಲಕ ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಲು ಸಮರ್ಥರು, ಅವರನ್ನು ಬಿಟ್ ಇನ್ನಾರಿದ್ದಾರೆನ್ನುವ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಟಾಂಗ್ ನೀಡಿದ್ದಾರೆ.

ಎಲ್ಲ ಹುದ್ದೆಗಳಿಗೆ ಎಲೆಕ್ಷನ್ ನಡೆಯಲಿ
ಕಾಂಗ್ರೆಸ್ ಪಕ್ಷದ ಸಂವಿಧಾನದ ಪ್ರಕಾರ, ಎಲ್ಲ ಹುದ್ದೆಗಳಿಗೂ ಚುನಾವಣೆ ನಡೆಯಬೇಕು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಇತರ ಎಲ್ಲ ಹುದ್ದೆಗಳಿಗೆ ಚುನಾವಣೆ ನಡೆಸಿ. ಸಂಘಟನೆಗಾಗಿ ಕೊನೆಯ ಬಾರಿ ಚುನಾವಣೆ ನಡೆದಿದ್ದು 24 ವರ್ಷಗಳ ಹಿಂದೆ. ಆಗ ಸೀತಾರಾಮ್ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅದೇ ಕೊನೆ. ಮತ್ತೆ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷರ ನೇಮಕ ಮೂಲಕವೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಈಗ. ನಾಮನಿರ್ದೇಶನಗೊಂಡವರು ಅಧ್ಯಕ್ಷರ ವಿರುದ್ಧ ಮಾತನಾಡುವುದಿಲ್ಲ. ಚುನಾವಣೆ ಮೂಲಕ ಆಯ್ಕೆಯಾದವರು ಅಧ್ಯಕ್ಷರಿಗೆ ಸಲಹೆ ಕೊಡಲು ಸಾಧ್ಯವಾಗುತ್ತದೆ. ಆ ಕೆಲಸವನ್ನು ನಾಮನಿರ್ದೇಶನಗೊಂಡವರು ಮಾಡಲಾರರು. ಹಾಗಾಗಿಯೇ ಪಕ್ಷ ಸೋಲುತ್ತಿದೆ ಎಂದು ಚವಾಣ್ ಹೇಳಿದರು.

ಇದನ್ನು ಓದಿ | Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್​ 17ಕ್ಕೆ; ಮತ ಎಣಿಕೆ 19ಕ್ಕೆ

Exit mobile version