Site icon Vistara News

Mallikarjun Kharge | ಇದೆಂಥ ಹೊಸ ಭಾರತ? ಬಿಜೆಪಿ ನೀತಿಗಳನ್ನು ಟೀಕಿಸಿದ ಕಾಂಗ್ರೆಸ್‌ನ ಹೊಸ ಅಧ್ಯಕ್ಷ ಖರ್ಗೆ

Mallikarjun Kharge

ನವ ದೆಹಲಿ: ಈ ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿತ್ತು. ಆ ಬುನಾದಿಯನ್ನು ಕಿತ್ತು ಹಾಕುವ ಪ್ರಯತ್ನಗಳು ನಡೆದಿವೆ. ಭಾರತದಲ್ಲಿ ಇಂಥದೊಂದು ಸಂದರ್ಭ ಎದುರಾಗಬಹುದು ಎಂದು ಈ ಹಿಂದೆ ಯಾರೂ ನಿರೀಕ್ಷಿಸರಲಿಲ್ಲ ಎಂದು ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದರು. ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಇಂದು ದೇಶದಲ್ಲಿ ಸುಳ್ಳು, ದ್ವೇಷಗಳೇ ರಾಜ್ಯಭಾರ ಮಾಡುತ್ತಿವೆ. ಈ ದ್ಷೇಷದ ತಂತ್ರಗಳನ್ನು ನಾವು ಹಿಮ್ಮೆಟ್ಟಿಸೋಣ. ಕಾಂಗ್ರೆಸ್ ವಿಚಾರಧಾರೆಯೇ ಸಂವಿಧಾನ ವಿಚಾರಧಾರೆಯಾಗಿದೆ. ಭಾರತೀಯರೂ ಇದನ್ನು ನಂಬುತ್ತಾರೆ. ಬಹಳಷ್ಟು ಜನರು ಭಾರತೀಯರು ಕಾಂಗ್ರೆಸ್‌ ಜತೆಗಿದ್ದಾರೆ. ಅವರಿಗೆ ಅಪಮೌಲ್ಯಗೊಳ್ಳುತ್ತಿರುವ ಪ್ರಜಾತಂತ್ರದ ಬಗ್ಗೆ ಬೇಸರವಿದೆ. ನೀವು ಬನ್ನಿ ನಮ್ಮೊಂದಿಗೆ, ನಾವೆಲ್ಲ ಒಂದಾಗಿ ಹೋಗೋಣ. ಇದರಿಂದ ದೇಶ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಖರ್ಗೆ ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಭಾರತೀಯರ ಜೀವನದ ಭಾಗವಾಗಿದೆ. ನಾವು ಅಂದಿನಿಂದಲೂ ಭಾರತೀಯರ ಹಿತಕ್ಕಾಗಿ ಕೆಲಸ ಮಾಡಿದ್ದೇವೆ. ನಮ್ಮ ನಾಯಕರು ಪ್ರಾಣಗಳನ್ನು ತ್ಯಾಗ ಮಾಡಿದ್ದಾರೆ. ಆದರೂ ಇಂದು ಕೆಲವರು ನಮ್ಮಿಂದ ದೂರ ಇದ್ದಾರೆ. ಆದರೆ, ಜನರನ್ನು ಮತ್ತೆ ವಾಪಸ್ ಕರೆ ತರುವ ಕೆಲಸವನ್ನು ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಋಣಿಯಾಗಿದ್ದೇನೆ ಎಂದು ಖರ್ಗೆ ಅವರು ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಬದುಕಿನ ಎಲ್ಲ ವರ್ಗದ ಜನರನ್ನು ಅವರು ಭೇಟಿ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ತಿಳಿಯುತ್ತಿದ್ದಾರೆ. ಅವರೊಂದಿಗೆ ಸಂವಾದ ಮಾಡುತ್ತಿದ್ದಾರೆ. ಇದು ನಮ್ಮ ಪಕ್ಷದ ಅತಿ ದೊಡ್ಡ ಸಾಧನೆಯಾಗಿದೆ ಎಂದು ಖರ್ಗೆ ಅವರು ಹೇಳಿದರು.

ಇದೆಂಥ ಹೊಸ ಭಾರತ?
ಅಧಿಕಾರದಲ್ಲಿರುವ ನಮ್ಮ ವಿರೋಧಿಗಳು ಪ್ರತಿಪಕ್ಷಗಳ ಇಲ್ಲದ ಭಾರತವನ್ನು ಎದುರು ನೋಡುತ್ತಿದ್ದಾರೆ. ಇದಕ್ಕಾಗಿ ಅವರು ಹೊಸ ಭಾರತ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಯುವಕರಿಗೆ ಉದ್ಯೋಗವಿಲ್ಲ; ರೈತರ ಮೇಲೆ ಜೀಪು ಹತ್ತಿಸಿ ಸಾಯಿಸಲಾಗುತ್ತಿದೆ; ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ; ಅತ್ಯಾಚಾರಿಗಳಿಗೆ ಸನ್ಮಾನ ಮಾಡಲಾಗುತ್ತಿದೆ… ಇದು ನಿಮ್ಮ ಹೊಸ ಭಾರತವೇ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದರು.

ಸರ್ಕಾರವು ಕಣ್ಣು ಮುಚ್ಚಿ ಕುಳಿತಿದೆ. ಈ ಜನರ ಬೆವರಿನ ಹಣದಿಂದ ನಿರ್ಮಾಣ ಮಾಡಲಾದ ಎಲ್ಲ ಸಾರ್ವಜನಿಕ ವಲಯದ ಕಂಪನಿಗಳನ್ನು ಇಂದು ಮಾರಾಟ ಮಾಡಲಾಗುತ್ತಿದೆ. ಅವುಗಳನ್ನು ತಮ್ಮ ಮಿತ್ರರರಿಗೆ ಜೇಬಿಗೆ ಸುರಿಯುತ್ತಿದ್ದಾರೆ. ಈ ಹೊಸ ಭಾರತದಲ್ಲಿ ಹಸಿವು ಹೆಚ್ಚಾಗುತ್ತಿದೆ; ಶಿಕ್ಷಣ ವೆಚ್ಚ ಹೆಚ್ಚಾಗಿದೆ; ರೂಪಾಯಿ ಕೆಳಗೆ ಬೀಳುತ್ತಿದೆ. ಸರ್ಕಾರ ನಿದ್ದೆ ಮಾಡುತ್ತಿದೆ; ವಿರೋಧಿಗಳನ್ನು ಹಣಿಯಲು ಇ.ಡಿ, ಸಿಬಿಐ ಮತ್ತು ತೆರಿಗೆ ಇಲಾಖೆಗಳು ದಿನ 24 ಗಂಟೆಯೂ ಕೆಲಸ ಮಾಡುತ್ತಿವೆ. ಇದೆಂಥಾ ಹೊಸ ಭಾರತ ಎಂದು ಖರ್ಗೆ ಅವರು ಕೇಳಿದರು.

ವಿರೋಧಿಗಳ ಹೊಸ ಭಾರತದಲ್ಲಿ ನಾಥುರಾಮ್ ಗೋಡ್ಸೆಯನ್ನು ದೇಶ ಭಕ್ತ ಎಂದು ಬಿಂಬಿಸಲಾಗುತ್ತಿದೆ; ಮಹಾತ್ಮ ಗಾಂಧಿಯನ್ನು ದೇಶದ್ರೋಹಿ ಎಂದು ಹೇಳಲಾಗುತ್ತಿದೆ. ಸತ್ಯವನ್ನು ಸುಳ್ಳು ಮಾಡಲಾಗುತ್ತಿದೆ, ಸುಳ್ಳನ್ನು ಸತ್ಯವೆಂದು ನಂಬಿಸಲಾಗುತ್ತಿದೆ. ಈ ಹೊಸ ಭಾರತದಲ್ಲಿ ದಲಿತರನ್ನು, ಅಲ್ಪಸಂಖ್ಯಾತರನ್ನು ಅವಮಾನ ಮಾಡಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಬದಲಿಸಲಾಗುತ್ತಿದೆ; ಸಂಘದ ಸಂವಿಧಾನವನ್ನು ಪ್ರತಿಷ್ಠಾಪಿಸುವ ಕೆಲಸ ನಡೆದಿದೆ. ಹೊಸ ಭಾರತಕ್ಕಾಗಿ ಕಾಂಗ್ರೆಸ್ ಮುಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ನಾವು ಆ ರೀತಿಯಾಗಲು ಬಿಡುವುದಿಲ್ಲ ಎಂದು ಖರ್ಗೆ ಅವರು ಹೇಳಿದರು.

50 ವರ್ಷದೊಳಗಿನವರಿಗೆ ಹುದ್ದೆ
ಉದಯಪುರ ಶಿಬಿರದಲ್ಲಿ ನಿರ್ಧಾರ ಮಾಡಿದಂತೆ ಪಕ್ಷದ ಎಲ್ಲ ಸಂಘಟನಾ ಹಂತದಲ್ಲಿ ಯುವಕರಿಗೆ ಅವಕಾಶಗಳನ್ನು ಕಲ್ಪಿಸಲಾಗುವದು. ಈಗಾಗಲೇ ನಿರ್ಧರಿಸಿದಂತೆ ಶೀಘ್ರವೇ 50 ವರ್ಷಕ್ಕಿಂತ ಕೆಳಗಿನವರಿಗೆ ಶೇ.50ರಷ್ಟು ಸ್ಥಾನಗಳನ್ನು ಪಕ್ಷದ ಎಲ್ಲ ಹಂತಗಳಲ್ಲೂ ಮೀಸಲು ಇಡಲಾಗುವುದು ಎಂದು ಖರ್ಗೆ ಅವರು ಇದೇ ವೇಳೆ ಭರವಸೆ ನೀಡಿದರು.

ಡರೋ ಮತ್- ಹೆದರಬೇಡಿ
ಸಂಸತ್ತಿನಲ್ಲಿದ್ದಾಗ ರಾಹುಲ್ ಗಾಂಧಿ ಅವರು ನಮ್ಮೆಲ್ಲರಿಗೂ ಡರೋ ಮತ್ ಎಂದು ಹೇಳುತ್ತಿದ್ದರು. ಅಂದರೆ, ಯಾವುದಕ್ಕೂ ಹೆದರಬೇಡಿ ಎಂದು. ಈ ಘೋಷಣೆಯಡಿ ನಾವು ಮುಂದಿನ ಚುನಾವಣೆಗಳನ್ನು ಎದುರಿಸೋಣ. ಹೋರಾಡೋಣ, ಗೆಲ್ಲೋಣ ಎಂದು ಖರ್ಗೆ ಅವರು ಹೇಳಿದರು.

ಇದನ್ನೂ ಓದಿ | Mallikarjun Kharge | ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ

Exit mobile version