Site icon Vistara News

ಕೊರೊನಾದಿಂದ ಆರೋಗ್ಯದಲ್ಲಿ ಏರುಪೇರು; ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

Sonia Gandhi Corona

ನವದೆಹಲಿ: ಕೊವಿಡ್‌ 19 ಸೋಂಕಿಗೆ ಒಳಗಾಗಿ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಈಗ ದೆಹಲಿಯ ಗಂಗಾ ರಾಮ್‌ ರಾಸ್ಪತ್ರೆಗೆ ದಾಖಲಾಗಿದ್ದಾರೆ. ಕೊವಿಡ್‌ 19 ಸಂಬಂಧಿ ತೊಂದರೆಗಳಿಂದ ಅವರು ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂದು ಕಾಂಗ್ರೆಸ್‌ ಪಕ್ಷ ತಿಳಿಸಿದೆ. ಸೋನಿಯಾ ಗಾಂಧಿಯವರಿಗೆ ಜೂ.2ರಂದು ಕೊವಿಡ್‌ 19 ಸೋಂಕು ದೃಢಪಟ್ಟಿತ್ತು. ಸೌಮ್ಯ ಲಕ್ಷಣಗಳನ್ನು ಹೊಂದಿದ್ದ ಅವರು, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಕೆಲವು ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಥ ದೊಡ್ಡಮಟ್ಟದ ಸಮಸ್ಯೆ ಏನಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ಬಾರಿಯೂ ಇ.ಡಿ. ವಿಚಾರಣೆಗೆ ಹಾಜರಾಗೋದು ಅನುಮಾನ !
ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್‌ ಗಾಂಧಿಯವರಿಗೆ ನ್ಯಾಷನಲ್‌ ಹೆರಾಲ್ಡ್‌ ಕೇಸ್‌ಗೆ ಸಂಬಂಧಪಟ್ಟು ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ.)ನೋಟಿಸ್‌ ನೀಡಿದೆ. ಸೋನಿಯಾ ಗಾಂಧಿ ಜೂ.8ಕ್ಕೆ ಇ.ಡಿ.ಅಧಿಕಾರಿಗಳ ವಿಚಾರಣೆ ಎದುರಿಸಬೇಕಿತ್ತು. ಆದರೆ ಜೂ.2ರಂದೇ ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ವರದಿ ಆಧರಿಸಿ, ವಿಚಾರಣೆ ದಿನಾಂಕವನ್ನು ಮುಂದೂಡಿ, ಜೂ.23ಕ್ಕೆ ಬರುವಂತೆ ಇ.ಡಿ. ಹೇಳಿತ್ತು. ಆದರೀಗ ಕಾಂಗ್ರೆಸ್‌ ಅಧ್ಯಕ್ಷೆ ಕೊರೊನಾದಿಂದ ಆಸ್ಪತ್ರೆಗೇ ದಾಖಲಾಗಿದ್ದಾರೆ. ಇನ್ನೂ 10 ದಿನಗಳಲ್ಲಿ ಅವರು ಸುಧಾರಿಸಿಕೊಂಡು ಇ.ಡಿ. ವಿಚಾರಣೆ ಎದುರಿಸುತ್ತಾರಾ?-ಸದ್ಯ ಈ ಬಗ್ಗೆ ಪಕ್ಷ ಏನನ್ನೂ ಹೇಳಿಲ್ಲ. ಅಂದಹಾಗೇ, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನಾಳೆ (ಜೂ.13) ಇ.ಡಿ. ವಿಚಾರಣೆಗೆ ಹಾಜರಾಗಬೇಕು.

ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌: ಜೂ.23ರಂದು ಹಾಜರಾಗಲು ಸೋನಿಯಾ ಗಾಂಧಿಗೆ ED ಸಮನ್ಸ್‌

Exit mobile version