ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯನ್ನು ಜಾರಿ ನಿರ್ದೇಶನಾಯಲಯ ಸತತ ಮೂರು ದಿನ ವಿಚಾರಣೆ ಮಾಡಿ, ಮತ್ತೆ ಶುಕ್ರವಾರ ಹಾಜರಾಗುವಂತೆ ತಿಳಿಸಿದೆ. ಇಂದು ರಾಹುಲ್ ಗಾಂಧಿ ವಿಚಾರಣೆಗೆ ಇ.ಡಿ. ಬ್ರೇಕ್ ಕೊಟ್ಟಿದ್ದರೂ ಕಾಂಗ್ರೆಸ್ ಪ್ರತಿಭಟನೆಯನ್ನು ನಿಲ್ಲಿಸಲಿಲ್ಲ. ಬದಲಿಗೆ ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಕೈ ತೀವ್ರ ಹೋರಾಟ ನಡೆಸಿದೆ. ದೆಹಲಿ, ಹೈದರಾಬಾದ್, ಗೋವಾ, ಬೆಂಗಳೂರು, ಚಂಡಿಗಢ, ನಾಗಾಲ್ಯಾಂಡ್, ಜೈಪುರ, ಚೆನ್ನೈ, ಉತ್ತರ ಪ್ರದೇಶ, ತಿರುವನಂತಪುರಂ, ಪುದುಚೇರಿ ಸೇರಿ ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ʼರಾಜಭವನ್ ಚಲೋʼ ಪ್ರತಿಭಟನೆ ನಡೆಸಿದ್ದಾರೆ. ಇವರ ಧರಣಿ, ಹೋರಾಟದಿಂದಾದ ಅವ್ಯವಸ್ಥೆ ನಿಯಂತ್ರಿಸಲು ಕೆಲವೆಡೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರೆ, ಇನ್ನೂ ಹಲವೆಡೆ ಜಲಫಿರಂಗಿ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಪೊಲೀಸ್ ಅಧಿಕಾರಿ ಕಾಲರ್ ಹಿಡಿದ ನಾಯಕಿ !
ತೆಲಂಗಾಣದಲ್ಲಿ ಇಂದು ಕಾಂಗ್ರೆಸ್ ನಾಯಕರು ರಾಜಭವನ್ ಚಲೋ ನಡೆಸಿದರು. ಮುಂಜಾನೆ 5.30ರ ಸುಮಾರಿಗೇ ಪ್ರತಿಭಟನೆಗೆ ಇಳಿದಿದ್ದರು. ಇದರಿಂದ ಭದ್ರತೆ ವ್ಯವಸ್ಥೆ ಏರುಪೇರಾಗಿತ್ತು. ಕೈ ಮುಖಂಡರ ಪ್ರತಿಭಟನೆ ಹಿಂಸಾಚಾರ ಸ್ವರೂಪಕ್ಕೆ ತಾಳಿತ್ತು. ರಾಜಭವನದ ಬಳಿಯೇ ವಾಹನಗಳಿಗೆ, ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಬಸ್‌ನ ಟಾಪ್ ಮೇಲೆ ಹತ್ತಿ, ಇ.ಡಿ., ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆ ಕಾವು ಕಡಿಮೆ ಮಾಡಲು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲು ಭಟ್ಟಿ ವಿಕ್ರಮಾರ್ಕ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪೊಲೀಸ್ ಅಧಿಕಾರಿಯೊಬ್ಬರ ಶರ್ಟ್ ಕಾಲರ್ ಹಿಡಿದು ಎಳೆದ ವಿಡಿಯೋವೊಂದು ವೈರಲ್ ಆಗುತ್ತಿದೆ. ಪೊಲೀಸ್ ಕಾಲರ್ ಹಿಡಿದ ರೇಣುಕಾರನ್ನು ಉಳಿದ ಸಿಬ್ಬಂದಿ ದೂರ ಕರೆದುಕೊಂಡು ಹೋಗಿದ್ದಾರೆ.
ಕೇರಳದಲ್ಲಿ 2 ಕಡೆ ಪ್ರತಿಭಟನೆ ನಡೆದಿದೆ. ರಾಜಭವನದ ಎದುರು ಕಾಂಗ್ರೆಸ್ ನೇತೃತ್ವದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ರಾಜ್ಯ ಸಚಿವಾಲಯದ ಎದುರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದ್ದಾರೆ. ಪೊಲೀಸರತ್ತ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಹೀಗೆ ರೊಚ್ಚಿಗೆದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಈ ವಿಡಿಯೋಗಳೂ ವೈರಲ್ ಆಗುತ್ತಿವೆ.
ಗುಜರಾತ್‌ನಲ್ಲೂ ಪ್ರತಿಭಟನೆ
ಗುಜರಾತ್‌ನ ಗಾಂಧಿನಗರದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್‌ನ ಎಲ್ಲ ಶಾಸಕರು, ನಾಯಕರು, ಕಾರ್ಯಕರ್ತರು ಒಟ್ಟಾಗಿ ಗಾಂಧಿನಗರದ ಸರ್ಕೀಟ್ ಹೌಸ್‌ನಿಂದ ರಾಜಭವನಕ್ಕೆ ಮೆರವಣಿಗೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರಾಜಭವನದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆಯ ಉದ್ದಕ್ಕೂ ಹೆಚ್ಚಿನ ಪೊಲೀಸರು ಇದ್ದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಪ್ರಮುಖರು ರಾಜಭವನದ ಸಿವಿಲ್ ಲೈನ್ಸ್ ಗೇಟ್ ಬಳಿ ಧರಣಿ ಕುಳಿತಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದ್ದು ಬಿಜೆಪಿ ಕುತಂತ್ರ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ರಾಜಸ್ಥಾನ ರಾಜ್ಯ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಮಾತನಾಡಿ, ಈ ದೇಶದಲ್ಲಿ ಅದೆಷ್ಟೋ ಸಮಸ್ಯೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರಸರ್ಕಾರವೇ ಸೃಷ್ಟಿಸಿದೆ. ಅದನ್ನೆಲ್ಲ ಮರೆಮಾಚಿ, ಜನರ ಗಮನ ಬೇರೆಡೆಗೆ ಸೆಳೆಯಲು ರಾಹುಲ್ ಗಾಂಧಿಯನ್ನು ನ್ಯಾಷನಲ್ ಹೆರಾಲ್ಡ್ ಕೇಸ್ ನೆಪದಲ್ಲಿ ಇ.ಡಿ. ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಮುಂದುವರಿದ ಅವ್ಯವಸ್ಥೆ
ಜೂ.13ರಿಂದ ಅಂದರೆ ರಾಹುಲ್ ಗಾಂಧಿ ಇ.ಡಿ. ವಿಚಾರಣೆ ಪ್ರಾರಂಭವಾದಾಗಿನಿಂದಲೂ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದೂ ರಾಜಭವನ ಚಲೋ ನಡೆದಿತ್ತು. ಲೆಫ್ಟಿನೆಂಟ್ ಗವರ್ನರ್ ನಿವಾಸದತ್ತ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಅರ್ಧದಲ್ಲೇ ತಡೆದಿದ್ದಾರೆ. ಇದರಿಂದ ಸಿಟ್ಟಾದ ಕೈ ನಾಯಕರು ಬ್ಯಾರಿಕೇಡ್‌ಗಳ ಮೇಲೆ ಹತ್ತಿದ ಪರಿಣಾಮ ನೂಕುನುಗ್ಗಲು ಉಂಟಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡುವ ಜತೆಗೆ, ಟಿಯರ್ ಗ್ಯಾಸ್ ಪ್ರಯೋಗ ಮಾಡಿದ್ದಾರೆ.
ಪುದುಚೇರಿಯಲ್ಲೂ ಕಾಂಗ್ರೆಸ್ ಮುಖಂಡರ ಪ್ರತಿಭಟನೆ ನಡೆದಿದೆ. ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ವಿ.ಸುಬ್ರಹ್ಮಣಿಯನ್, ಸಂಸದರಾದ ವೈತಿಲಿಂಗಂ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ಹೊರಟ ಸಂದರ್ಭದಲ್ಲಿ ಅವರನ್ನು ಪೊಲೀಸರು ತಡೆದರು. ಚೆನ್ನೈನಲ್ಲೂ ಕೂಡ ವ್ಯಾಪಕ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ: ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ