ನವ ದೆಹಲಿ: ರಾಯ್ಪುರಕ್ಕೆ ಹೊರಟಿದ್ದ ಕಾಂಗ್ರೆಸ್ ಮುಖಂಡರ ನಿಯೋಗ, ದೆಹಲಿ ಏರ್ಪೋರ್ಟ್ನಲ್ಲಿ ಇಂಡಿಗೊ ವಿಮಾನದ ಎದುರಲ್ಲಿ ಕುಳಿತು ಪ್ರತಿಭಟನೆ (Congress Protest) ನಡೆಸಿದೆ. ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸುಪ್ರಿಯಾ ಶ್ರೀನೇತ್ ಮತ್ತು ಇತರರು ಇಂದು ರಾಯ್ಪುರಕ್ಕೆ ಹೊರಟಿದ್ದರು. ಇಂಡಿಗೊ ವಿಮಾನವನ್ನೂ ಹತ್ತಿದ್ದರು. ಆದರೆ ದೆಹಲಿ ಪೊಲೀಸರ ಸೂಚನೆ ಇದೆ ಎಂಬ ಕಾರಣ ನೀಡಿ, ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಪವನ್ ಖೇರಾರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿದ್ದಂತೆ ಕಾಂಗ್ರೆಸ್ನ ಉಳಿದ ಮುಖಂಡರೂ ಕೆಳಗೆ ಇಳಿದು, ಅಲ್ಲೇ ಕುಳಿತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಶುರು ಮಾಡಿದರು.
ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ನರೇಂದ್ರ ದಾಮೋದರ್ದಾಸ್ ಮೋದಿ ಅಲ್ಲ, ನರೇಂದ್ರ ಗೌತಮ್ದಾಸ್ ಮೋದಿ ಎಂದು ವ್ಯಂಗ್ಯ ಮಾಡಿದ್ದರು. ಅದೇ ಕಾರಣಕ್ಕೆ ಬಿಜೆಪಿ ಈಗ ಪವನ್ ಖೇರಾ ಅವರು ವಿಮಾನ ಹತ್ತಲು ಬಿಡುತ್ತಿಲ್ಲ. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆ ಎಂಬುದು ಕಾಂಗ್ರೆಸ್ ಆರೋಪ.
ಕಲ್ಲಿದ್ದಲು ತೆರಿಗೆ ಹಗರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಇ.ಡಿ ಅಧಿಕಾರಿಗಳು ಛತ್ತೀಸ್ಗಢ್ನ ಹಲವು ಕಾಂಗ್ರೆಸ್ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಮನೆ-ಕಚೇರಿಗಳ ಮೇಲಿನ ಇ.ಡಿ.ರೇಡ್ ವಿರೋಧಿಸಿ ಅಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು, ಪ್ರಮುಖರು ಎಲ್ಲ ಒಗ್ಗೂಡಿ ಇ.ಡಿ.ಕಚೇರಿ ಎದುರು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಪವನ್ ಖೇರಾ ಮತ್ತು ಇತರ ನಾಯಕರೂ ಕೂಡ ಅಲ್ಲಿಗೇ ತೆರಳುತ್ತಿದ್ದರು. ಆದರೆ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗೆ ಇಳಿಸಿದ ಕಾರಣ, ಉಳಿದವರೂ ಇಳಿದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ನಿಂದ ಪ್ರತಿಭಟನೆ
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್, ‘ನಾವೆಲ್ಲರೂ ರಾಯ್ಪುರಕ್ಕೆ ಹೋಗಲು ಇಂಡಿಗೋ 6ಇ 204 ವಿಮಾನ ಹತ್ತಿ ಕುಳಿತಿದ್ದೆವು. ಆದರೆ ಏಕಾಏಕಿ ನಮ್ಮ ಪವನ್ ಖೇರಾ ಬಳಿ ಬಂದು ವಿಮಾನದಿಂದ ಕೆಳಗೆ ಇಳಿಯುವಂತೆ ಹೇಳಲಾಯಿತು. ಕೇಳಿದ್ದಕ್ಕೆ, ಅವರ ಲಗೇಜ್ಗೆ ಸಂಬಂಧಪಟ್ಟಂತೆ ಏನೋ ಗೊಂದಲವಾಗಿದೆ ಎಂದು ಹೇಳಿದರು. ಆದರೆ ವಾಸ್ತವದಲ್ಲಿ ಪವನ್ ಖೇರಾ ಅವರು ಯಾವುದೇ ಲಗೇಜ್ ಹೊಂದಿರಲೇ ಇಲ್ಲ. ಇನ್ನು ಅವರು ವಿಮಾನದಿಂದ ಇಳಿಯುತ್ತಿದ್ದಂತೆ ಸಿಐಎಸ್ಎಫ್ (CISF)ನಿಂದ ನೋಟಿಸ್ ಕೂಡ ನೀಡಲಾಗಿದೆ. ಯಾರ ಆದೇಶದ ಕಾರಣಕ್ಕೆ? ಯಾವ ನಿಯಮದ ಅಡಿಯಲ್ಲಿ ಹೀಗೆ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇನ್ನೊಂದೆಡೆ ಈ ಬಗ್ಗೆ ಸ್ಪಷ್ಟನೆ ಕೊಟ್ಟ ದೆಹಲಿ ಪೊಲೀಸರು ‘ಪವನ್ ಖೇರಾ ಅವರಿಗೆ ರಾಯ್ಪುರಕ್ಕೆ ಪ್ರಯಾಣಿಸಲು ಅವಕಾಶ ಕೊಡದಂತೆ, ಅಸ್ಸಾಂ ಪೊಲೀಸರು ನಮಗೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ.