ನವದೆಹಲಿ: ನವೆಂಬರ್ 7 ಮತ್ತು 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿರುವ ಛತ್ತೀಸ್‌ಗಢ ರಾಜ್ಯದಲ್ಲಿ (Chhattisgarh election) ಚುನಾವಣಾ ಕಾವು ಜೋರಾಗಿದೆ. ಕಾಂಗ್ರೆಸ್ ಪಕ್ಷವು (Congress Party) ಬುಧವಾರ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (Candidates List) ರಿಲೀಸ್ ಮಾಡಿದೆ. ಈ ಬಾರಿ 53 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಮೊದಲನೇ ಪಟ್ಟಿಯಲ್ಲಿ 30 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷವು ರಾಯ್‌ಪುರ ನಗರ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ವಿಕಾಸ್ ಉಪಾಧ್ಯಾಯ, ರಾಯ್‌ಪುರ ಗ್ರಾಮಾಂತರದಿಂದ ಪಂಕಜ್ ಶರ್ಮಾ ಮತ್ತು ರಾಯ್‌ಪುರ ನಗರ ದಕ್ಷಿಣ ಕ್ಷೇತ್ರದಿಂದ ಮಹಂತ್ ರಾಮ್ ಸುಂದರ್ ದಾಸ್ ಅವರನ್ನು ಕಣಕ್ಕಿಳಿಸಿದೆ.
ಜಿತಿನ್ ಜೈಸ್ವಾಲ್ ಜಗದಲ್‌ಪುರದಿಂದ ಮತ್ತು ಶೈಲೇಶ್ ಪಾಂಡೆ ಬಿಲಾಸ್‌ಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದೆ. ಹಾಲಿ ಶಾಸಕ ಅರುಣ್ ವೋರಾ ಅವರನ್ನು ದುರ್ಗ್ ಸಿಟಿಯಿಂದ ಮರುನಾಮಕರಣ ಮಾಡಲಾಗಿದೆ. ಅವರ ತಂದೆ ಮೋತಿಲಾಲ್ ವೋರಾ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
छत्तीसगढ़ में होने वाले विधानसभा चुनाव, 2023 के लिए भारतीय राष्ट्रीय कांग्रेस द्वारा जारी उम्मीदवारों की सूची। pic.twitter.com/mhmgy8Wzzw
— Congress (@INCIndia) October 18, 2023
ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ. ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಆಡಳಿತಕ್ಕೇರುವ ಪ್ರಯತ್ನವನ್ನು ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Bhupesh Baghel: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್ ಆಡಿದ ಭೂಪೇಶ್ ಬಘೇಲ್!
ಛತ್ತೀಸ್‌ಗಢದಲ್ಲಿ ಎಸ್‌ಟಿ ಸಮುದಾಯಗಳಿಗೆ ಮಣೆ
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ 30 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎಸ್‌ಟಿ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪಟಾನ್ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ಅವರು ಅಂಬಿಕಾಪುರದಿಂದ ಕಣಕ್ಕಿಳಿದಿದ್ದಾರೆ. 30 ಅಭ್ಯರ್ಥಿಗಳ ಪೈಕಿ ಎಸ್‌ಟಿ ಸಮುದಾಯದ 14 ಅಭ್ಯರ್ಥಿಗಳು ಇದ್ದಾರೆ. ಆಡಳಿತ ವಿರೋಧಿ ಅಲೆ ಇದ್ದರೂ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ವಿಶೇಷವಾಗಿದೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದಾರೆ.