Site icon Vistara News

9 Saal 9 Sawaal: 9 ವರ್ಷದ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್​ ಕೇಳಿದ 9 ಪ್ರಶ್ನೆಗಳು ಯಾವವು?; ’ಏಕೆ’ಗಳ ಸುರಿಮಳೆ!

Congress release 9 Saal 9 Sawal Document Over 9 Years Of PM Modi Government

#image_title

ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿತು (9 Years Of PM Modi Government). ಕೇಂದ್ರದಲ್ಲಿ ಬಿಜೆಪಿ ಆಡಳಿತ ಹಿಡಿದು ಇದೀಗ 9ವರ್ಷಗಳಾದ ಬೆನ್ನಲ್ಲೇ ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್​ 9 ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ಸಂಬಂಧಪಟ್ಟಂತೆ ‘9 ವರ್ಷಗಳು..9 ಪ್ರಶ್ನೆಗಳು (9 saal 9 sawaal)’ ಎಂಬ ಕೈಪಿಡಿಯನ್ನು ಇಂದು ಕಾಂಗ್ರೆಸ್​ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಇತರ ನಾಯಕರು ಬಿಡುಗಡೆಗೊಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಹಿಡಿದು 9ವರ್ಷಗಳಾದವು ಎಂದು ಬೀಗುತ್ತಿದೆ. ಆದರೆ ಇದೇ ಹೊತ್ತಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳನ್ನು ಅವರು ಭಾರತ್ ಜೋಡೋ ಯಾತ್ರೆಗೂ ಮುನ್ನ, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಅಷ್ಟೇ ಅಲ್ಲ, ಭಾರತ್​ ಜೋಡೋ ಯಾತ್ರೆ ಮುಗಿದು ಇವತ್ತಿನವರೆಗೂ ನಿರಂತರವಾಗಿ ಕೇಳುತ್ತಲೇ ಇದ್ದಾರೆ. ಆದರೆ ಅದಕ್ಕೆ ಇಂದಿನವರೆಗೆ ಉತ್ತರಿಸಲಿಲ್ಲ. ಇನ್ನಾದರೂ ಪ್ರಧಾನಿ ಮೋದಿಯವರು ಮೌನ ಮುರಿಯಬೇಕು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದು ಜೈರಾಮ್ ರಮೇಶ್ ಅವರು ಇಂದು ಕೈಪಿಡಿ ಬಿಡುಗಡೆ ವೇಳೆ ಹೇಳಿದ್ದಾರೆ. ಹಾಗೇ, ಆ 9 ಪ್ರಶ್ನೆಗಳು ಯಾವವು ಎಂಬುದನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬಿಜೆಪಿಗೆ ಕಾಂಗ್ರೆಸ್ ಕೇಳಿದ 9ಪ್ರಶ್ನೆಗಳು ಯಾವವು?

1. ಆರ್ಥಿಕತೆ: ಭಾರತದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳು ಗಗನಕ್ಕೇರುತ್ತಿವೆ ಯಾಕೆ? ಇಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತಾರಿಗೇ ಉಳಿಯುತ್ತಿದ್ದಾರೆ ಯಾಕೆ? ದೇಶದಲ್ಲಿ ಆರ್ಥಿಕ ಅಸಮಾನತೆ ಈ ಪರಿ ಹೆಚ್ಚುತ್ತಿರುವಾಗಲೂ ಸಾರ್ವಜನಿಕ ಆಸ್ತಿಗಳನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೇ ಯಾಕೆ ಮಾರಾಟ ಮಾಡಲಾಗುತ್ತಿದೆ.

2. ಕೃಷಿ ಮತ್ತು ರೈತರು: ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳನ್ನು ಯಾಕೆ ಈಡೇರಿಸಿಲ್ಲ? ಅವರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಯಾಕೆ ಮಾನ್ಯ ಮಾಡಿಲ್ಲ? ಕನಿಷ್ಠ ಬೆಂಬಲ ಬೆಲೆಯನ್ನು ಇನ್ನೂ ಯಾಕೆ ಕಾನೂನು ಪ್ರಕಾರ ಖಾತರಿ ಪಡಿಸಿಲ್ಲ ಮತ್ತು 9ವರ್ಷಗಳಾದರೂ ರೈತರ ಆದಾಯ ಏಕೆ ದ್ವಿಗುಣಗೊಂಡಿಲ್ಲ?

3. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ: ನಿಮ್ಮ ಸ್ನೇಹಿತ ಅದಾನಿಯವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಸಾಮಾನ್ಯ ಜನರು ಕಷ್ಟಪಟ್ಟು ದುಡಿದು ಸಂಪಾದಿಸಿ ಎಲ್​ಐಸಿ ಮತ್ತು ಎಸ್​ಬಿಐನಲ್ಲಿ ಉಳಿತಾಯ ಮಾಡಿರುವ ಹಣಕ್ಕೆ ಏಕೆ ಅಪಾಯ ತಂದೊಡ್ಡುತ್ತೀರಿ? ಕಳ್ಳರು ಪರಾರಿಯಾಗಲು ಏಕೆ ಅವಕಾಶ ಮಾಡಿಕೊಡುತ್ತೀರಿ? ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ಇದ್ದರೂ ನೀವ್ಯಾಕೆ ಸುಮ್ಮನೆ ಇದ್ದೀರಿ? ಮತ್ತು ಭಾರತೀಯರನ್ನೇಕೆ ಸಂಕಷ್ಟಕ್ಕೆ ದೂಡುತ್ತಿದ್ದೀರಿ?

4. ಚೀನಾ ಮತ್ತು ರಾಷ್ಟ್ರೀಯ ಭದ್ರತೆ: ಚೀನಾ ಭಾರತದ ಭೂಭಾಗವನ್ನು ಅತಿಕ್ರಮಣ ಮಾಡಿಲ್ಲ ಎಂದು ಪ್ರಧಾನಿ ಮೋದಿಯವರು 2020ರಲ್ಲಿ ಹೇಳಿದ್ದಾರೆ. ಈ ಮೂಲಕ ಚೀನಾಕ್ಕೆ ಕ್ಲೀನ್​ ಚಿಟ್ ಕೊಟ್ಟಿದ್ದಾರೆ. ಇಷ್ಟಾದ ಮೇಲೆ ಕೂಡ ಚೀನಾದವರು ಏಕೆ ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡುತ್ತಿದ್ದಾರೆ? ಚೀನಾದೊಂದಿಗೆ ಭಾರತ 18 ಸುತ್ತಿನ ಸಭೆ ನಡೆಸಿದ ಬಳಿಕವೂ ಆ ದೇಶದ ಸೈನಿಕರು ಭಾರತದ ಭೂಭಾಗವನ್ನು ಬಿಟ್ಟುಕೊಡಲು ಒಪ್ಪಿತ್ತಿಲ್ಲ ಯಾಕೆ? ಅಷ್ಟೇ ಅಲ್ಲ, ಅವರ ಆಕ್ರಮಣವನ್ನು ಮುಂದುವರಿಸುತ್ತಿದ್ದಾರೇಕೆ?
(ಗಲ್ವಾನ್ ಸಂಘರ್ಷ ನಡೆದ ಬಳಿಕ ಚೀನಾ ಲಡಾಖ್​ ಗಡಿಯಲ್ಲಿ ಭಾರತದ ಭೂಭಾಗ ಅತಿಕ್ರಮಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ಚೀನಾ ಭಾರತದ ಯಾವುದೇ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ ಎಂದಿದ್ದರು. ಚೀನಾ ಈಗ ಎಲ್ಲ ಗಡಿಗಳಲ್ಲೂ ಉಪಟಳ ಕೊಡುತ್ತಿದೆ. ಗಡಿಗೆ ಸಮೀಪವೇ ಹಳ್ಳಿಗಳನ್ನು ನಿರ್ಮಾಣ ಮಾಡುತ್ತಿದೆ. ಭಾರತದ ಸೈನಿಕರಿಗೆ ತೊಂದರೆ ಕೊಡುತ್ತಿದೆ. ಅದನ್ನೇ ಉಲ್ಲೇಖಿಸಿ ಕಾಂಗ್ರೆಸ್ ಈ ಪ್ರಶ್ನೆ ಕೇಳಿದೆ.

5. ಸಾಮಾಜಿಕ ಸಾಮರಸ್ಯ: ಚುನಾವಣೆಗಳಲ್ಲಿ ಗೆಲ್ಲುವುದಕ್ಕೋಸ್ಕರ ದೇಶಾದ್ಯಂತ ಉದ್ದೇಶಪೂರ್ವಕವಾಗಿಯೇ ದ್ವೇಷಯುಕ್ತ ರಾಜಕೀಯ ಮಾಡುತ್ತಿದ್ದೀರಲ್ಲ, ಈ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತೀದ್ದೀರಲ್ಲ ಯಾಕೆ?

6. ಸಾಮಾಜಿಕ ನ್ಯಾಯ: ಮಹಿಳೆಯರು, ದಲಿತರು, ಎಸ್​ಸಿ/ಎಸ್​ಟಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ), ಒಬಿಸಿ (ಇತರೆ ಹಿಂದುಳಿದ ವರ್ಗ) ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಯಾಕೆ ಮೌನವಹಿಸಿದ್ದೀರಿ? ಜಾತಿ ಆಧಾರಿತ ಜನಗಣತಿ ಬೇಡಿಕೆಯನ್ನೇಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ?

7. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ: 9ವರ್ಷಗಳಲ್ಲಿ ನಮ್ಮ ಸಂವಿಧಾನದ ಮೌಲ್ಯಗಳನ್ನು ಕುಂದಿಸಿದ್ದೀರಿ, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದೀರಿ, ಏಕೆ? ಪ್ರತಿಪಕ್ಷಗಳು ಮತ್ತು ವಿಪಕ್ಷಗಳ ರಾಜಕಾರಣಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವುದೇಕೆ? ಚುನಾಯಿತ ಸರ್ಕಾರಗಳನ್ನು ಪತನಗೊಳಿಸಲು ದೊಡ್ಡಮಟ್ಟದಲ್ಲಿ ಹಣ ಬಲವನ್ನು ಪ್ರಯೋಗ ಮಾಡುತ್ತಿರುವುದು ಕಾರಣವೇನು?

8. ಅಭಿವೃದ್ಧಿ ಯೋಜನೆಗಳು: ಬಡವರು, ನಿರ್ಗತಿಕರು, ಬುಡಕಟ್ಟು ಜನಾಂಗಕ್ಕೆ ಬಜೆಟ್​​ನಲ್ಲಿ ಹಣವನ್ನು ಕಡಿತಗೊಳಿಸುವ ಮತ್ತು ಹಲವು ನಿರ್ಬಂಧಿತ ನಿಯಮಗಳನ್ನು ಹಾಕುವ ಮೂಲಕ ಅವರ ಅಭಿವೃದ್ಧಿ ಯೋಜನೆಗಳನ್ನು ದುರ್ಬಲಗೊಳಿಸಿದ್ದೇಕೆ?

9. ಕೊವಿಡ್ 19 ಅಸಮರ್ಪಕ ನಿರ್ವಹಣೆ: ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡ 40 ಲಕ್ಷ ಜನರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಲು ನಿರಾಕರಿಸುತ್ತಿರುವುದು ಯಾಕೆ? ಕೊರೊನಾ ಕಾಲಿಟ್ಟಾಗ ಏಕಾಏಕಿ ಲಾಕ್​ಡೌನ್​ ಹೇರಿ, ಸಾವಿರಾರು ವಲಸೆ ಕಾರ್ಮಿಕರು ಕೆಲಸವಿದಲ್ಲದೆ ತಮ್ಮ ಮನೆಗಳಿಗೆ ವಾಪಸ್ ಆಗುವಂತೆ ಮಾಡಿದ್ದಲ್ಲದೆ, ಅವರಿಗೆ ಯಾವುದೇ ನೆರವು ನೀಡದೆ ಇರುವುದೇಕೆ?

Exit mobile version