ನವದೆಹಲಿ: ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಚುನಾವಣೆ (Gujarat election) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಪಕ್ಷವು 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯಸಭಾ ಸದಸ್ಯ ಅಮೀ ಯಾಜ್ಞಿಕ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರತಿನಿಧಿಸುವ ಘಟಲೋದಿಯಾ ಕೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಅರ್ಜುನ್ ಮೋಧ್ವಾಡಿಯಾ ಅವರಿಗೂ ಪೋರಬಂದರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳನ್ನು ಪ್ರಕಟಿಸಲಾಗಿರುವ 43 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಝಲೋಡ್(ಎಸ್‌ಟಿ) ಕ್ಷೇತ್ರದಲ್ಲಿ ಮಾತ್ರ ಶಾಸಕರನ್ನು ಹೊಂದಿದೆ. ಹೀಗಿದ್ದೂ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಭವೇಶ್ ಕತರಾ ಅವರ ಬದಲಿಗೆ ಮಿತೇಶ್ ಗರಸಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಗರಸಿಯಾ ಅವರು 2012-17ರಲ್ಲಿ ಅವಧಿಯಲ್ಲಿ ಈ ಕ್ಷೇತ್ರದಿಂದಲೇ ಶಾಸಕರಾಗಿದ್ದರು.
ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಜತೆಗೇ ಕೆಲವು ಮಾಜಿ ಶಾಸಕರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ವಡೋದರಾ ಕಾಂಗ್ರೆಸ್ ನಾಯಕ ನರೇಂದ್ರ ರಾವತ್ ಅವರ ಪತ್ನಿಗೂ ಸಯ್ಯಾಜಿಗುಂಜ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.
ಗುಜರಾತ್‌ನಲ್ಲಿ ಡಿ.1 ಮತ್ತು ಡಿ.5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಡಿಸೆಂಬರ್ 8ರಂದು ಚುನಾವಣೆ ಫಲಿತಾಂಶವು ಪ್ರಕಟವಾಗಲಿದೆ. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವ ಸಾಧ್ಯತೆಗಳಿವೆ. ದೀರ್ಘವಧಿಯಿಂದಲೂ ಬಿಜೆಪಿಯೇ ಗುಜರಾತ್‌ನಲ್ಲಿ ಆಡಳಿತ ಪಕ್ಷವಾಗಿದೆ.
ಇದನ್ನೂ ಓದಿ | Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ