Site icon Vistara News

ರಾಜಸ್ಥಾನದಿಂದ ರಾಜ್ಯಸಭೆ ಕಣಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿ ಯಾರಿಗೆ?

sonia gandhi

Congress releases a list of candidates for the Rajya Sabha Election; Sonia Gandhi from Rajasthan

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಕೊನೆಗೂ ರಾಜ್ಯಸಭೆ ಪ್ರವೇಶಿಸುವುದು ನಿಶ್ಚಿತವಾಗಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ (Rajya Sabha Election) ಕಾಂಗ್ರೆಸ್‌ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನದಿಂದ (Rajasthan) ಸೋನಿಯಾ ಗಾಂಧಿ (Sonia Gandhi) ಅವರು ಸ್ಪರ್ಧಿಸುತ್ತಿದ್ದು, ಜೈಪುರದಲ್ಲಿ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಅವರು ಉಪಸ್ಥಿತರಿದ್ದರು.

ರಾಜಸ್ಥಾನದಿಂದ ಸೋನಿಯಾ ಗಾಂಧಿ, ಬಿಹಾರದಿಂದ ಡಾ.ಅಖಿಲೇಶ್‌ ಪ್ರಸಾದ್‌ ಸಿಂಗ್‌, ಬಿಹಾರದಿಂದ ಅಭಿಷೇಕ್‌ ಮನು ಸಿಂಘ್ವಿ, ಮಹಾರಾಷ್ಟ್ರದಿಂದ ಚಂದ್ರಕಾಂತ್‌ ಹಂಡೋರೆ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಲಾಗಿದೆ. ಸೋನಿಯಾ ಗಾಂಧಿ ಅವರು 2004ರಿಂದಲೂ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭೆ ಕ್ಷೇತ್ರವು ತೆರವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಗಳಿಗೆ ರಾಯ್‌ಬರೇಲಿ ಕ್ಷೇತ್ರವನ್ನು ಬಿಟ್ಟುಕೊಡಲೆಂದೇ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Rajya Sabha Election: ಬಿಜೆಪಿಯಿಂದ ಮತ್ತೊಂದು ಪಟ್ಟಿ; ಇಬ್ಬರು ಸಚಿವರಿಗೆ ರಾಜ್ಯಸಭೆ ಟಿಕೆಟ್‌

ಬಿಜೆಪಿಯಿಂದ ಮತ್ತೊಂದು ಪಟ್ಟಿ

ಬಿಜೆಪಿ ಕೂಡ ಮತ್ತೊಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ, ಇಬ್ಬರು ಕೇಂದ್ರ ಸಚಿವರಿಗೆ ಟಿಕೆಟ್‌ ನೀಡುವ ಮೂಲಕ ಮಹತ್ವದ ಕುತೂಹಲಗಳಿಗೆ ತೆರೆ ಎಳೆದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಒಡಿಶಾ ಹಾಗೂ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್.‌ ಮುರುಗನ್‌ ಅವರನ್ನು ಬಿಜೆಪಿಯು ಮಧ್ಯಪ್ರದೇಶದಿಂದ ಕಣಕ್ಕಿಳಿಸಿದೆ.

ರಾಜ್ಯಸಭೆ ಸದಸ್ಯರಾಗಿರುವ ಕೇಂದ್ರ ಸಚಿವರಿಗೆ ಬಿಜೆಪಿಯು ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ರಾಜೀವ್‌ ಚಂದ್ರಶೇಖರ್‌ ಅವರಿಗೆ ನೀಡದ ಕಾರಣ ಇಂತಹ ಮಾತುಗಳು ಕೇಳಿಬಂದಿದ್ದವು. ಆದರೀಗ, ಇಬ್ಬರು ಕೇಂದ್ರ ಸಚಿವರಿಗೆ ಬಿಜೆಪಿಯು ರಾಜ್ಯಸಭೆ ಟಿಕೆಟ್‌ ನೀಡಿದೆ. ಇನ್ನು ಮಧ್ಯಪ್ರದೇಶದಿಂದ ಎಲ್‌.ಮುರುಗನ್ ಜತೆಗೆ ಉಮೇಶ್‌ನಾಥ್‌ ಮಹಾರಾಜ್‌, ಮಾಯಾ ನರೋಲಿಯಾ, ಬಾನ್ಸಿಲಾಲ್‌ ಗುರ್ಜಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಫೆಬ್ರವರಿ 27ರಂದು ಚುನಾವಣೆ

ಒಟ್ಟು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು ತೀರ್ಮಾನಿಸಿದೆ. ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version