Site icon Vistara News

ನೆಹರು-ಗಾಂಧಿ ಸಂಕೋಲೆಯಿಂದ ಕಾಂಗ್ರೆಸ್‌ ಹೊರಬರಲಿ; ಪ್ರಣಬ್‌ ಮುಖರ್ಜಿ ಪುತ್ರಿ ಆಗ್ರಹ

Rahul Gandi And Sharmistha Mukherjee

Congress Should Look Beyond Nehru-Gandhi Family: Says Pranab Mukherjee's Daughter Sharmistha

ಜೈಪುರ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇವೆ. ಬಿಜೆಪಿಯನ್ನು ಸೋಲಿಸಲು ಸಕಲ ರೀತಿಯಲ್ಲಿ ಇಂಡಿಯಾ ಒಕ್ಕೂಟ ಪ್ರಯತ್ನಿಸುತ್ತಿದೆ. ರಾಹುಲ್‌ ಗಾಂಧಿ (Rahul Gandhi) ಅವರು ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಮೂಲಕ ಜನರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, “ಕಾಂಗ್ರೆಸ್‌ ಪಕ್ಷವು ನೆಹರು-ಗಾಂಧಿ ಕುಟುಂಬದ ನಾಯಕತ್ವದಿಂದ ಹೊರಬರಬೇಕು” ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಸಲಹೆ ನೀಡಿದ್ದಾರೆ.

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಶರ್ಮಿಷ್ಠಾ ಮುಖರ್ಜಿ, “ನಾನೊಬ್ಬ ಕಾಂಗ್ರೆಸ್‌ ಬೆಂಬಲಿಗಳಾಗಿ, ದೇಶದ ಜವಾಬ್ದಾರಿಯುತ ನಾಗರಿಕಳಾಗಿ ಕಾಂಗ್ರೆಸ್‌ ಸ್ಥಿತಿಯ ಬಗ್ಗೆ ಮರುಕವಿದೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲನುಭವಿಸಿತು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿತು. ಯಾವುದೇ ಒಬ್ಬ ನಾಯಕನ ನೇತೃತ್ವದಲ್ಲಿ ಪಕ್ಷ ಸೋಲನುಭವಿಸಿದೆ ಎಂತಾದರೆ, ಆ ಪಕ್ಷದ ನಾಯಕತ್ವವನ್ನು ಬದಲಿಸಬೇಕು. ನೆಹರು-ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಹೊರಬರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಹಾಗಂತ ನಾನು ರಾಹುಲ್‌ ಗಾಂಧಿ ನಾಯಕತ್ವವನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಯಾರ ನಾಯಕತ್ವವನ್ನು ಕೂಡ ಒಮ್ಮೆಗೆ ವಿಶ್ಲೇಷಣೆ ಮಾಡಬಾರದು. ನನ್ನ ತಂದೆಯ ಬಗ್ಗೆ ಕೇಳಿದರೂ ನಾನು ಎಲ್ಲವನ್ನೂ ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ. ಆದರೆ, ಕಾಂಗ್ರೆಸ್‌ ಬೆಂಬಲಿಗಳಾಗಿ ನಾನು ಪಕ್ಷದ ಏಳಿಗೆ ಬಗ್ಗೆ ಕಾಳಜಿ ಹೊಂದಿದ್ದೇನೆ. ಹಾಗಾಗಿ, ನಾಯಕತ್ವ ಬದಲಾವಣೆ ಬಗ್ಗೆ ಪಕ್ಷವು ಆಸಕ್ತಿ ತೋರಿಸಬೇಕು. ನಾಯಕತ್ವ ಬದಲಾವಣೆಯಿಂದ ಪಕ್ಷದ ವರ್ಚಸ್ಸು ಬದಲಾಗಬಹುದು” ಎಂದಿದ್ದಾರೆ.

ಇದನ್ನೂ ಓದಿ: ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

ನನ್ನ ತಂದೆಗೆ ಬಿಟ್ಟಿಯಾಗಿ ಸ್ಥಾನಮಾನ ಸಿಕ್ಕಿದ್ದಲ್ಲ

ಕಾಂಗ್ರೆಸ್‌ ಕುರಿತು ಶರ್ಮಿಷ್ಠಾ ಅವರು ನೀಡಿದ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದು, “ಪ್ರಣಬ್‌ ಮುಖರ್ಜಿ ಅವರು ರಾಜಕೀಯ ಏಳಿಗೆ ಹೊಂದಿದ್ದು ಕಾಂಗ್ರೆಸ್‌ ಹಾಗೂ ನೆಹರು-ಗಾಂಧಿ ಕುಟುಂಬದ ಆಶೀರ್ವಾದದಿಂದ” ಎಂದು ವ್ಯಕ್ತಿಯೊಬ್ಬರು ಟೀಕಿಸಿದ್ದಾರೆ. ‌

ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಿಷ್ಠಾ ಮುಖರ್ಜಿ, “ನನ್ನ ತಂದೆಗೆ ಕಾಂಗ್ರೆಸ್‌ ಯಾವುದೇ ಜವಾಬ್ದಾರಿಯನ್ನು ಬಿಟ್ಟಿಯಾಗಿ ಕೊಟ್ಟಿದ್ದಲ್ಲ. ನನ್ನ ತಂದೆಯು ಗೌರವ, ಸ್ಥಾನವನ್ನು ಗಳಿಸಿಕೊಂಡಿದ್ದೇ ಹೊರತು, ದಾನವಾಗಿ ಪಡೆದುಕೊಂಡಿದ್ದಲ್ಲ. ಅಷ್ಟಕ್ಕೂ, ಈಗ ಕಾಂಗ್ರೆಸ್‌ಗೆ ಯಾವ ಸಿದ್ಧಾಂತವಿದೆ? ಚುನಾವಣೆ ಬಂದಾಗ ಶಿವನ ದೇವಾಲಯಕ್ಕೆ ಹೋಗುವುದು ಸಿದ್ಧಾಂತವೇ” ಎಂದು ಪ್ರಶ್ನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version