ನವ ದೆಹಲಿ: ರಾಷ್ಟ್ರಪತಿ ಚುನಾವಣೆಯನ್ನೂ ಈ ಸಲ ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಎನ್‌ಡಿಒ ಒಕ್ಕೂಟದಿಂದ ನಿಲ್ಲುವ ಅಭ್ಯರ್ಥಿಯೇ ಗೆಲ್ಲುವುದು ನಿಶ್ಚಿತ ಎಂಬ ಸನ್ನಿವೇಶ ಈಗಾಗಲೇ ಸೃಷ್ಟಿಯಾಗಿದ್ದರೂ ಪ್ರತಿಪಕ್ಷಗಳು ಒಮ್ಮತದಿಂದ ಒಬ್ಬ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿಸಲು ಮುಂದಾಗಿವೆ. ಈ ಬಗ್ಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಮಮತಾ ಬ್ಯಾನರ್ಜಿ (Mamata Banerjee) ದೆಹಲಿಯ ಕಾನ್‌ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಬುಧವಾರ (ಜೂ.15)ರಂದು ಮಧ್ಯಾಹ್ನ 3 ಗಂಟೆಗೆ ಪ್ರತಿಪಕ್ಷಗಳ ಸಭೆ ಕರೆದಿದ್ದಾರೆ. ಹಾಗೇ, ಈ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಕೂಡ ಒಪ್ಪಿಕೊಂಡಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸುವರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಒಕ್ಕೂಟದಿಂದ ಯಾರು ಅಭ್ಯರ್ಥಿ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಆದರೆ ಎನ್‌ಸಿಪಿ ನಾಯಕ ಶರದ್ ಪವಾರ್ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಅವರು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ನಾನು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿ ಇಲ್ಲ ಎಂದು ಹೇಳಿರುವ ಶರದ್ ಪವಾರ್ ಬುಧವಾರ ಮಮತಾ ಬ್ಯಾನರ್ಜಿ ಕರೆದಿರುವ ಸಭೆಗೆ ಹಾಜರಾಗಲಿದ್ದಾರೆ.
ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿಯಾದರೂ ಬಿಜೆಪಿಯನ್ನು ಸೋಲಿಸಬೇಕು ಎಂಬುದು ಮಮತಾ ಬ್ಯಾನರ್ಜಿಯವರ ಮಹದಾಸೆ. 2024 ರ ಲೋಕಸಭೆ ಚುನಾವಣೆನ್ನೂ ಕೂಡ ಒಟ್ಟಾಗಿ ಎದುರಿಸುವ ಆಶಯವನ್ನು ದೀದಿ ವ್ಯಕ್ತಪಡಿಸಿದ್ದಾರೆ. ಹಾಗೇ, ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ನಿಲ್ಲಿಸುವ ಕುರಿತು ಚರ್ಚಿಸಲು ಸಭೆ ಕರೆದಿದ್ದು, ಅದಕ್ಕೆ ಹಾಜರಾಗುವಂತೆ ಮಮತಾ ಬ್ಯಾನರ್ಜಿ ಶನಿವಾರ 22 ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದರು. ಜೂ.14ರಂದು ಎನ್‌ಸಿಪಿ ನಾಯಕ ಶರದ್ ಪವಾರ್‌ರನ್ನು ಖುದ್ದು ಭೇಟಿಯಾಗಿ ಆಮಂತ್ರಣ ನೀಡಿದ್ದರು.
ಇದನ್ನೂ ಓದಿ: video viral: ಇದೇ ತರ ಹೊಟ್ಟೆ ಬೆಳೆದ್ರೆ ಏನಾಗ್ತದೆ ನೋಡು.. ಮಮತಾ ಬ್ಯಾನರ್ಜಿ ಹೀಗೂ ಜೋಕ್ ಮಾಡ್ತಾರಾ?