Site icon Vistara News

Narendra Modi: ಉತ್ತರ-ದಕ್ಷಿಣ ಹೆಸರಲ್ಲಿ ಕಾಂಗ್ರೆಸ್‌ನಿಂದ ದೇಶ ವಿಭಜನೆ; ಡಿಕೆಸುಗೆ ಮೋದಿ ಟಾಂಗ್

Narendra Modi In Rajya Sabha

Congress Trying To Divide India By North And South: PM Narendra Modi Taunts DK Suresh

ನವದೆಹಲಿ: ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ (DK Suresh) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದರು. “ಕಾಂಗ್ರೆಸ್‌ ಬ್ರಿಟಿಷರಿಂದ ಪ್ರಭಾವಿತಗೊಂಡಿದೆ. ಹಾಗಾಗಿಯೇ, ಕಾಂಗ್ರೆಸ್‌ ನಾಯಕರು ಬ್ರಿಟಿಷರ ಮನಸ್ಥಿತಿಯಿಂದ, ಒಡೆದು ಆಳುವ ನೀತಿಯಿಂದ ಹೊರಬಂದಿಲ್ಲ. ಇದೇ ಕಾರಣಕ್ಕಾಗಿ, ಕಾಂಗ್ರೆಸ್‌ ಈಗಲೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ” ಎಂದು ಟೀಕಿಸಿದರು.

“ದೇಶವು ಏಕತೆಯಿಂದ ಕೂಡಿದೆ. ಇಂದು ಭಾರತವು ಒಗ್ಗೂಡಿ ಏಳಿಗೆಯತ್ತ ಸಾಗುತ್ತಿದೆ. ಭಾರತವು ಯಶಸ್ವಿಯಾಗಿ ಜಿ-20 ಸಭೆಯನ್ನು ಆಯೋಜಿಸುವ ಮೂಲಕ ವಿಶ್ವದಲ್ಲೇ ಗುರುತಿಸಿಕೊಂಡಿದೆ. ನನ್ನ ದೇಶವು ಚೆನ್ನೈನಲ್ಲೂ ಇದೆ, ಬೆಂಗಳೂರಿನಲ್ಲೂ ಇದೆ, ಕೋಲ್ಕೊತಾದಲ್ಲೂ ಇದೆ. ನನ್ನ ದೇಶದ ಒಗ್ಗಟ್ಟಿನಿಂದ ಕೂಡಿದೆ. ಭಾರತವು ಒಂದು ದೇಹ ಇದ್ದಂತೆ. ಕಾಲಿಗೆ ನೋವಾದರೆ, ಇಡೀ ದೇಹಕ್ಕೆ ನೋವುಂಟಾಗುತ್ತದೆ. ನಾನು ಒಂದು ಭಾಗದ ಪ್ರಧಾನಿಯಲ್ಲ, ದೇಶಕ್ಕೆ ಪ್ರಧಾನಿ” ಎಂದು ಹೇಳಿದರು.

ಆದರೆ, ಕಾಂಗ್ರೆಸ್‌ ಈಗ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಎಸಗುತ್ತಿದೆ. ಜಾರ್ಖಂಡ್‌ನ ಒಬ್ಬ ಆದಿವಾಸಿ ಹುಡುಗನೊಬ್ಬ ಚಿನ್ನ ಗೆದ್ದುಕೊಂಡು ಬಂದರೆ, ನಮಗೆ ಬರೀ ಜಾರ್ಖಂಡ್‌ ಬಾಲಕ ಎನಿಸುವುದಿಲ್ಲ. ಆತ ಭಾರತದ ಹುಡುಗನಾಗುತ್ತಾನೆ. ನಾವು ಇಂತಹ ಮನಸ್ಥಿತಿ ಹೊಂದಿರಬೇಕು. ಎಲ್ಲರೂ ಒಂದು, ಎಲ್ಲ ಪ್ರದೇಶಗಳ ಏಕತೆಯಿಂದ ಮುಂದಡಿ ಇಡಬೇಕೇ ಹೊರತು, ರಾಜಕೀಯಕ್ಕಾಗಿ ದೇಶವನ್ನು ವಿಭಜಿಸಲು ಯತ್ನಿಸಬಾರದು” ಎಂದರು.

“ದೇಶವನ್ನು, ದೇಶದ ಜನರನ್ನು ದಾರಿತಪ್ಪಿಸುವುದೇ ಕಾಂಗ್ರೆಸ್‌ ಗುರಿಯಾಗಿದೆ. 2019ರಲ್ಲಿ ಎಚ್‌ಎಎಲ್‌ ಗೇಟ್‌ಗೆ ತೆರಳಿದ ಕಾಂಗ್ರೆಸ್ಸಿಗರು, ಎಚ್‌ಎಎಲ್‌ಅನ್ನು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಹಸಿ ಸುಳ್ಳುಗಳನ್ನು ಹಬ್ಬಿಸಿತು. ಆದರೆ, ಎಚ್‌ಎಎಲ್‌, ಬಿಎಸ್‌ಎನ್‌ಎಲ್‌, ಏರ್‌ ಇಂಡಿಯಾವನ್ನು ಹಾಳು ಮಾಡಿದ್ದೇ ಕಾಂಗ್ರೆಸ್.‌ ಆದರೆ, ಎನ್‌ಡಿಎ ಸರ್ಕಾರವು ಎಚ್‌ಎಎಲ್‌ಗೆ ಅತಿ ಹೆಚ್ಚು ಅನುದಾನ ನೀಡಿದೆ. ಎಲ್‌ಐಸಿಯ ಷೇರುಗಳ ಮೌಲ್ಯವು ಗಣನೀಯವಾಗಿ ಜಾಸ್ತಿಯಾಗಿದೆ. ನಾವು ದಾಖಲೆ ಪ್ರಮಾಣದಲ್ಲಿ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

“ನಾವು ಕಳೆದ 10 ವರ್ಷದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮುಕ್ತಿಗೊಳಿಸಿದ್ದೇವೆ. ಬಡತನದಿಂದ ಮುಕ್ತರಾಗಿರುವ ಬಡವರು ಯಾವುದೇ ಅವಘಡಗಳಿಂದ ಬಡವರಾಗಬಾರದು ಎಂದು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದು ಅವರಿಗೆ ಆರೋಗ್ಯ ಭದ್ರತೆ ನೀಡಿದ್ದೇವೆ. ಮೂರನೇ ಅವಧಿಯಲ್ಲಿ ನಾವು ದೇಶವನ್ನು ವಿಕಸಿತ ಭಾರತವನ್ನಾಗಿಸುತ್ತೇವೆ. ಸೋಲಾರ್‌ ವಿದ್ಯುತ್‌ ಮೂಲಕ ಜನರಿಗೆ ಉಚಿತವಾಗಿ ವಿದ್ಯುತ್‌ ನೀಡುತ್ತೇವೆ. ಪ್ರತಿ ಮನೆಗೆ ಶುದ್ಧ ನೀರು ಪೂರೈಸುತ್ತೇವೆ. ಆತ್ಮನಿರ್ಭರ ಭಾರತ ಅಭಿಯಾನವು ಉಚ್ಛ್ರಾಯ ಸ್ಥಿತಿ ತಲುಪಲಿದೆ. ಮೇಡ್ ಇನ್‌ ಇಂಡಿಯಾ, ಸೆಮಿಕಂಡಕ್ಟರ್‌, ವಿದ್ಯುತ್‌ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ” ಎಂದರು.

“ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಬುಲೆಟ್‌ ರೈಲು ಓಡಲಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೂ ದೇಶದಲ್ಲಿ ವ್ಯಾಪಿಸಲಿದೆ. ಬಾಹ್ಯಾಕಾಶದಲ್ಲೂ ಭಾರತ ಪರಾಕ್ರಮ ಸಾಧಿಸಲಿದೆ. ದೇಶದ ಆರ್ಥಿಕತೆ ಇನ್ನಷ್ಟು ಭದ್ರವಾಗಲಿದೆ. ಎಲ್ಲ ಕ್ಷೇತ್ರಗಳಲ್ಲೂ ಏಳಿಗೆ ಹೊಂದುವ ಮೂಲಕ ಭಾರತವು ಐದು ವರ್ಷದಲ್ಲಿ ಸುವರ್ಣಯುಗ ತಲುಪಲಿದೆ. ದೇಶವೇ ಮೊದಲು ಎಂಬ ಭಾವನೆಯೊಂದಿಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಮುಂದೆಯೂ ಇದೇ ರೀತಿ ದುಡ್ಡಿಯುತ್ತೇವೆ” ಎಂದು ನರೇಂದ್ರ ಮೋದಿ ಅವರು ಭಾಷಣ ಕೊನೆಗೊಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version