ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಘೋಷಣೆಯನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಒಂದೇ ಉತ್ಪನ್ನವನ್ನು ಮತ್ತೆ ಮತ್ತೆ ಬಿಡುಗಡೆ ಮಾಡುವ ಪ್ರಯತ್ನಗಳಿಂದಾಗಿ ಕಾಂಗ್ರೆಸ್ ದುಕಾನ್ ಮುಚ್ಚುವಂತಾಗಿದೆ ಎಂದು ಲೇವಡಿ ಮಾಡಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ (Budget Session) ಸಂದರ್ಭದಲ್ಲಿ ಪ್ರಧಾನಿ ಸಂಸತ್ತಿನಲ್ಲಿ ಕಾಂಗ್ರೆಸ್ನ ಕಾರ್ಯತಂತ್ರವನ್ನು ಟೀಕಿಸಿದರು.
Speaking in the Lok Sabha. https://t.co/cwxdw7xo8S
— Narendra Modi (@narendramodi) February 5, 2024
ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಅಧೋಗತಿಗೆ ಕಾಂಗ್ರೆಸ್ ಕಾರಣ ಎಂದು ಹೇಳಿದರು. ಕಾಂಗ್ರೆಸ್ ವಿಫಲಗೊಂಡಿದೆ. ಆದಾಗ್ಯೂ ಇತರ ಪಕ್ಷಗಳಿಗೆ ಪ್ರದರ್ಶನ ನೀಡಲು ಅವಕಾಶ ನೀಡುತ್ತಿಲ್ಲ. ಅವರು ಸಂಸತ್, ಪ್ರತಿಪಕ್ಷ ಮತ್ತು ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶಕ್ಕೆ ಬಲವಾದ ವಿರೋಧ ಪಕ್ಷದ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಆದರೆ ದೇಶವು ವಂಶಪಾರಂಪರ್ಯ ರಾಜಕೀಯದ ಪರಿಣಾಮಗಳನ್ನು ಅನುಭವಿಸಿದೆ ಎಂದು ಮೋದಿ ಅವರು ಕಾಂಗ್ರೆಸ್ ವೈಖರಿಗೆ ಕುಟುಕಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಿಂದ ರಾಜ್ಯಸಭೆಗೆ ಸ್ಥಳಾಂತರಗೊಂಡಿದ್ದಾರೆ. “ಪರಿವಾರವಾದದಿಂದಾಗಿ ಗುಲಾಂ ನಬಿ ಆಜಾದ್ ಸಂಪೂರ್ಣವಾಗಿ ಪಕ್ಷದಿಂದ ಹೊರನಡೆದಿದ್ದಾರೆ. ಮುಂದೆಯೂ ಹಲವರು ತಮ್ಮ ಸ್ಥಾನ ಬದಲಿಸಲಿದ್ದಾರೆ. ಅಲ್ಲದೇ ಒಂದೇ ಪ್ರಾಡಕ್ಟ್‌ಅನ್ನು ಮತ್ತೆ ಮತ್ತೆ ಪರಿಚಯಿಸುವ ಪ್ರಯತ್ನಗಳು ಕಾಂಗ್ರೆಸ್ನ ಅಂಗಡಿಗಳು ಮುಚ್ಚುವಂತಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಗ್ಯಾರೇಜ್ಗೆ ಹೋದರೂ ಜೋಡಣೆ ಗೊತ್ತಿಲ್ಲ!
ರಾಹುಲ್ ಗಾಂಧಿ ದೆಹಲಿ ಆಟೋಮೊಬೈಲ್ ಮೆಕ್ಯಾನಿಕ್ ಅಂಗಡಿಗೆ ಹೋಗಿದ್ದ ಸಂದರ್ಭವನ್ನು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಕಾಂಗ್ರೆಸ್ ನಾಯಕ ಆಟೋ ಮೆಕ್ಯಾನಿಕ್ ಕೆಲಸ ಕಲಸ ಕಲಿತಿದೆ. ಆದ್ದರಿಂದ ಜೋಡಣೆ ಏನು ಎಂಬುದನ್ನೂ ಕಲಿತಿದೆ. ಆದರೆ ಮೈತ್ರಿಯಲ್ಲಿನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಕಲಿತಿಲ್ಲ ಎಂದು ಹೇಳಿದರು. ಈ ಮೂಲಕ ಇಂಡಿಯಾ ಬ್ಲಾಕ್ನಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳನ್ನು ಟೀಕಿಸಿದರು.
ಕಾಂಗ್ರೆಸ್ “ಕ್ಯಾನ್ಸಲ್ ಸಂಸ್ಕೃತಿ” ಯನ್ನು ಆಶ್ರಯಿಸುತ್ತಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ನಡೆಯನ್ನು ಬುದ್ಧಿಯಿಲ್ಲದೆ ಟೀಕಿಸುತ್ತಿದೆ ಎಂದು ಮೋದಿ ಆರೋಪಿಸಿದರು. “ಕಾಂಗ್ರೆಸ್ ಕ್ಯಾನ್ಸಲ್ ಸಂಸ್ಕೃತಿಯಲ್ಲಿ ಸಿಲುಕಿಕೊಂಡಿದೆ. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ವಂದೇ ಭಾರತ್ ಅನ್ನು ರದ್ದುಗೊಳಿಸಿ ಎಂದು ಅದು ಹೇಳುತ್ತಿದೆ. ದೇಶದ ಸಾಧನೆಗಳು ರದ್ದು ಮಾಡಿಸುವಷ್ಟು ದ್ವೇಷ ಅವರಲ್ಲಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಆರ್ಥಿಕ ಪ್ರಗತಿಯ ಭರವಸೆ
ಯುಪಿಎ ನೇತೃತ್ವದ ಸರ್ಕಾರವು ಈ ಹಿಂದೆ ಭಾರತಕ್ಕೆ 3ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಲು 30 ವರ್ಷ ಬೇಕು ಎಂದಿತ್ತು. ಅದರೆ, ನಾವು ನಮ್ಮ ಮೂರನೇ ಅವಧಿಯಲ್ಲೇ ಈ ಸಾಧನೆ ಮಾಡಲಿದ್ದೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. 2014ರಲ್ಲಿ ಭಾರತ 11ನೇ ಆರ್ಥಿಕ ಸ್ಥಾನದಲ್ಲಿತ್ತು. ನಮ್ಮ ಸರ್ಕಾರ ಎರಡನೇ ಅವಧಿಯಲ್ಲಿ ಸಾಕಷ್ಟು ಪ್ರಗತಿ ತಂದಿದೆ. ಇಂದು ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದು ಹೇಳಿದ ಮೋದಿ, ಯುಪಿಎ ಸರ್ಕಾರದ ವಿತ್ತ ಸಚಿವ ಪಿ. ಚಿದಂಬರಂರ ಕೊನೆಯ ಬಜೆಟ್ ಭಾಷಣವನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಆ ವೇಳೆ ಭಾರತ 11ನೇ ಆರ್ಥಿಕ ಶಕ್ತಿಯಾಗಿದ್ದೇ ಗೌರವದ ಮಾತಾಗಿತ್ತು. ಆ ವೇಳೆ ಮುಂದಿನ 3 ದಶಕದಲ್ಲಿ ಭಾರತದ ಜಿಡಿಪಿ 3ನೇ ಸ್ಥಾನಕ್ಕೆ ಹೋಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನಾವು ಅದಕ್ಕಿಂತ ಸಾಕಷ್ಟು ಮೊದಲೇ ಅದನ್ನು ಸಾಧಿಸಲಿದ್ದೇವೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ : Narendra Modi: ಭಾರತದ ವೈಭವ ಈಗ ಎದ್ದು ಕಾಣುತ್ತಿದೆ; ಲೋಕಸಭೆಯಲ್ಲಿ ಮೋದಿ ಹೇಳಿಕೆ
ನಾವು ಈ ಪವಿತ್ರ ಸಂಸತ್ನಲ್ಲಿ ನಿಂತಿದ್ದೇವೆ. ತಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲಿದೆ ಎಂಬ ಖಾತರಿ ನನಗಿದೆ ಎಂದು ಹೇಳಿದರು. ಕಾಂಗ್ರೆಸ್ ಮನಸ್ಥಿತಿ ಹೇಗಿತ್ತು ಎಂದರೆ, ನಮ್ಮ ದೇಶದ ಸಾಮರ್ಥ್ಯದ ಮೇಲೆ ವಿಶ್ವಾಸವೇ ಇಟ್ಟಿರಲಿಲ್ಲ. ಕಾಂಗ್ರೆಸ್ನ ಮಂದಗತಿಯ ಜೊತೆಗೆ ಯಾರೂ ಸ್ಪರ್ಧೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.
ನಾವು ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ನಗರದಲ್ಲಿನ ಬಡವರಿಗಾಗಿ 80 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್ಗೆ ಇಷ್ಟೊಂದು ಮನೆ ನಿರ್ಮಾಣ ಮಾಡಲು ನೂರು ವರ್ಷ ಬೇಕಾಗುತ್ತಿತ್ತು. 5 ತಲೆಮಾರುಗಳು ಕಳೆದುಹೋಗುತ್ತಿದ್ದವು ಎಂದು ಮೋದಿ ಟೀಕಿಸಿದರು.