ನವ ದೆಹಲಿ: ಟ್ವಿಟರ್‌ನಲ್ಲಿ ಕೈ ಪಕ್ಷ ಮಾಡಿದ ಟ್ವೀಟ್‌ವೊಂದು ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು, ಭಾರತ್ ಜೋಡೋ ಯಾತ್ರೆಯ ಪ್ರಚಾರಾರ್ಥವಾಗಿ ಟ್ವಿಟರ್‌ನಲ್ಲಿ ಸುಡುತ್ತಿರುವ ಆರ್‌ಎಸ್ಎಸ್‌ನ ಚೆಡ್ಡಿ ಚಿತ್ರವನ್ನು ಪೋಸ್ಟ್ ಮಾಡಿದ್ದು, ಬಿಜೆಪಿಯ ಕೆಂಡಾಮಂಡಲವಾಗಲು ಕಾರಣವಾಗಿದೆ.
BharatJodoYatra ಹ್ಯಾಷ್‌ಟ್ಯಾಗ್‌ನಡಿ ಕಾಂಗ್ರೆಸ್, “ದ್ವೇಷದ ಸಂಕೋಲೆಯಿಂದ ದ್ವೇಷವನ್ನುಬಿಡುಗಡೆ ಮಾಡಲು ಮತ್ತು ಬಿಜೆಪಿ-ಆರ್‌ಎಸ್ಎಸ್ ಮಾಡಿರುವ ನಷ್ಟವನ್ನು ಸರಿದೂಗಿಸುವ ಗುರಿಯನ್ನು ಸ್ಟೆಪ್ ಬೈ ಸ್ಟೆಪ್ ತಲುಪೋಣ” ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್‌ಗೆ ಕಾಂಗ್ರೆಸ್, ಸುಡುತ್ತಿರುವ ಖಾಕಿ ಚೆಡ್ಡಿ ಇರುವ ಚಿತ್ರವನ್ನು ಬಳಸಿಕೊಂಡಿದ್ದು, ಅದರಲ್ಲಿ ಇನ್ನು 145 ದಿನಗಳಷ್ಟೇ ಎಂದು ಬರೆಯಲಾಗಿದೆ.
ಕಾಂಗ್ರೆಸ್‌ನ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಅಲ್ಲದೇ, ಕೂಡಲೇ ಆ ಚಿತ್ರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಬೆಂಕಿ 1984ರಲ್ಲಿ ದಿಲ್ಲಿಯನ್ನು ಸುಟ್ಟಿತು. ಕಾಂಗ್ರೆಸ್‌ನ ಸಹಚರ ಶಕ್ತಿಗಳು 2002ರಲ್ಲಿ ಗೋಧ್ರಾ ಕರಸೇವಕರನ್ನು ದಹಿಸಿದವು. ಅವರೀಗ ಮತ್ತೆ ಹಿಂಸೆಗೆ ಕರೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲಿ ಬೆಂಕಿ ಹಚ್ಚುವ ಕಾಂಗ್ರೆಸ್‌ನ ರಾಜಕಾರಣಕ್ಕೆ ಆ ಪಕ್ಷ ಮಾಡಿರುವ ಟ್ವೀಟ್ ಸಾಂಕೇತಿಕವಾಗಿದೆ. ಈ ಬೆಂಕಿಯಲ್ಲಿ ಅವರೇ ಸುಟ್ಟು ಹೋಗುತ್ತಿದ್ದಾರೆ. ಸದ್ಯ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಶೀಘ್ರವೇ ಬೂದಿಯಾಗಲಿದೆ. ಈ ಟ್ವೀಟ್ ಸೇವ್ ಮಾಡಿಟ್ಟುಕೊಳ್ಳಿ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಈ ಟೀಕೆಗೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್ ಅವರು, ಇಲ್ಲದ ವಿಷಯಗಳನ್ನು ಅವರು ಕೆದಕುತ್ತಿದ್ದಾರೆ. ಇದಕ್ಕೆಲ್ಲ ನಾನು ಉತ್ತರ ಕೊಡಲಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳಿನ ಫ್ಯಾಕ್ಟರಿಯನ್ನು ಬಿಜೆಪಿ ನಡೆಸುತ್ತಿದೆ. ಅವರೀಗ ಹೆದರಿದ್ದಾರೆ. ಏನೂ ಬೇಕಾದರೂ ಹೇಳುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Bharat Jodo Yatra | 3ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ