Site icon Vistara News

Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

Narendra modi

Congress Will Bulldoze Ram Temple If It Comes To Power: Says PM Narendra Modi

ಲಖನೌ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕು ಹಂತದ ಮತದಾನ ಮುಗಿದರೂ ಚುನಾವಣೆ ಅಬ್ಬರ ಮಾತ್ರ ಮುಗಿದಿಲ್ಲ. ಇನ್ನೂ ಮೂರು ಹಂತದ ಮತದಾನ ಬಾಕಿ ಇರುವುದರಿಂದ ರಾಜಕೀಯ ನಾಯಕರು ತೀಕ್ಷ್ಣ ಹೇಳಿಕೆ, ವಾಗ್ದಾಳಿ, ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಸೇರಿ ಎಲ್ಲ ಪ್ರತಿಪಕ್ಷಳ ವಿರುದ್ಧ ವಾಗ್ಬಾಣ ಬಿಡುತ್ತಿದ್ದಾರೆ. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಬುಲ್ಡೋಜರ್‌ನಿಂದ ರಾಮಮಂದಿರವನ್ನು (Ram Mandir) ನೆಲಸಮಗೊಳಿಸುತ್ತಾರೆ” ಎಂದು ಶುಕ್ರವಾರ (ಮೇ 17) ವಾಗ್ದಾಳಿ ನಡೆಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಮಾತನಾಡಿದರು. “ದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಅವರು ರಾಮಲಲ್ಲಾನನ್ನು ಮತ್ತೆ ಟೆಂಟ್‌ಗೆ ಕಳುಹಿಸುತ್ತಾರೆ. ಅವರು ಬುಲ್ಡೋಜರ್‌ಗಳನ್ನು ಕಳುಹಿಸಿ ರಾಮಮಂದಿರವನ್ನು ನೆಲಸಮಗೊಳಿಸುತ್ತಾರೆ. ಪೀಳಿಗೆಗಳಿಂದ ತ್ಯಾಗ ಮಾಡಿದ ಫಲವಾಗಿ, 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ನೀವು ನಮಗೆ ಮತ ನೀಡಿದ ಕಾರಣ ಇದೆಲ್ಲ ಸಾಧ್ಯವಾಗಿದೆ. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ರಾಮಮಂದಿರವನ್ನು ನೆಲಸಮಗೊಳಿಸುತ್ತದೆ” ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ಮೋದಿ ಕಾಂಗ್ರೆಸ್‌ಗೆ ಕುಟುಕಿದರು. “ದೇಶಾದ್ಯಂತ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುವಾಗ ದೇಶವನ್ನು ವಿಭಜನೆ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂತು. ಆಗ ಇಡೀ ದೇಶ ಅಚ್ಚರಿಗೀಡಾಯಿತು. ದೇಶವನ್ನು ವಿಭಜನೆ ಮಾಡಲಾಗುತ್ತದೆಯೇ ಎಂಬ ಆತಂಕ ಮೂಡಿತು. ಆದರೆ, ಕಾಂಗ್ರೆಸಿಗರು ದೇಶವನ್ನು ಇಬ್ಭಾಗ ಮಾಡಿದರು. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಂಗ್ರೆಸಿಗರಿಗೆ ದೇಶ ಮುಖ್ಯವಲ್ಲ. ಅವರಿಗೆ ತಮ್ಮ ಕುಟುಂಬ ಮುಖ್ಯ, ಅಧಿಕಾರ ಮುಖ್ಯ” ಎಂದು ಟೀಕಿಸಿದರು.

ಬೀಗ ಜಡಿಯುತ್ತಾರೆ ಎಂದಿದ್ದ ಮೋದಿ

ಕೆಲ ದಿನಗಳ ಹಿಂದೆಯೂ ಮೋದಿ ಅವರು ರಾಮಮಂದಿರ ಹಾಗೂ ಕಾಂಗ್ರೆಸ್‌ ಬಗ್ಗೆ ಮಾತನಾಡಿದ್ದರು. “ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಹಾಗಾಗಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದು ಎಂಬ ಕಾರಣಕ್ಕಾಗಿ ಬಿಜೆಪಿಗೆ ಬಹುಮತ ನೀಡಿ” ಎಂದಿದ್ದರು.

ಇದನ್ನೂ ಓದಿ: ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

Exit mobile version