Site icon Vistara News

Ram Mandir: ಆಮಂತ್ರಣ ತಿರಸ್ಕರಿಸಿದ ಕಾಂಗ್ರೆಸ್‌ ಪಶ್ಚಾತ್ತಾಪ ಪಡಲಿದೆ ಎಂದ ಬಿಜೆಪಿ

Congress will regret to rejecting Ram Mandir invitation Says BJP

ನವದೆಹಲಿ: ಜನವರಿ 22ರಂದು ನಡೆಯಲಿರುವ ರಾಮ ಮಂದಿರ (Ram Mandir) ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷವು (Congress Party) ಅದಕ್ಕಾಗಿ ಪಶ್ಚಾತ್ತಾಪ ಪಡಲಿದೆ (regret) ಎಂದು ಭಾರತೀಯ ಜನತಾ ಪಾರ್ಟಿಯು ಪ್ರತಿಕ್ರಿಯಿಸಿದೆ(BJP Party). ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ನೀಡಲಾದ ಆಮಂತ್ರಣವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ತಿರಸ್ಕರಿಸಿದ ಬಳಿಕ ಬಿಜೆಪಿ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ. ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಚಾಳಿಯಲ್ಲಿ ಮುಳುಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಅವರು ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿದ್ದರೆ ಅದಕ್ಕಾಗಿ ಮುಂದೊಂದು ದಿನ ಪಶ್ಚಾತ್ತಾಪ ಪಡಲಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೇಳಿದ್ದಾರೆ. ಬಿಜೆಪಿ ನಾಯಕ ನಳಿನ್ ಕೊಹ್ಲಿ ಕೂಡ ಪ್ರತಿಕ್ರಿಯಿಸಿದ್ದು, ರಾಮನ ಅಸ್ತಿತ್ವವನ್ನೇ ಅಲ್ಲಗಳೆದಿದ್ದ ಕಾಂಗ್ರೆಸ್‌ನ ಈ ನಿರ್ಧಾರವು ಅಚ್ಚರಿ ಏನೂ ಅಲ್ಲ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅವರು ರಾಮನ ಅಸ್ತಿತ್ವವನ್ನು ನಿರಾಕರಿಸಿದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಿದರು. ಆದ್ದರಿಂದ, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿರುವುದು ಅಚ್ಚರಿ ಏನೂ ಅಲ್ಲ ಎಂದು ನಳಿನ್ ಕೊಹ್ಲಿ ಅವರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಜಿಂದೇರ್ ಸಿಂಗ್ ಸಿರ್ಸಾ ಅವರು ಪ್ರತಿಕ್ರಿಯಿಸಿ, ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗದಿರುವುದು ಅದು ಅವರ ಪಕ್ಷದ ನಿರ್ಧಾರ. ಆದರೆ, ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂದು ಹೇಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

Ram Mandir: ರಾಮಮಂದಿರ ಉದ್ಘಾಟನೆಗೆ ಹೋಗದಿರಲು ಸೋನಿಯಾ, ಖರ್ಗೆ ನಿರ್ಧಾರ

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ (Ram Mandir) ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್‌ (Congress) ತೀರ್ಮಾನಿಸಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಬರಬೇಕು ಎಂದು ಆಮಂತ್ರಣ ನೀಡಿದರೂ ಕಾಂಗ್ರೆಸ್‌ ಪಕ್ಷವು ಉದ್ಘಾಟನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದೆ. “ಇದು ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕ್ರಮವಾಗಿರುವ ಕಾರಣ ತೆರಳುವುದಿಲ್ಲ” ಎಂದು ಪ್ರಕಟಣೆ ಹೊರಡಿಸಿದೆ.

ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಅಧೀರ್‌ ರಂಜನ್‌ ಚೌಧರಿ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲಾಗಿದೆ. ಭಗವಾನ್‌ ಶ್ರೀರಾಮನನ್ನು ಕೋಟ್ಯಂತರ ಜನ ಆರಾಧಿಸುತ್ತಾರೆ. ಅಷ್ಟಕ್ಕೂ ಧರ್ಮವು ವೈಯಕ್ತಿಕ ವಿಚಾರವಾಗಿದೆ. ಅಷ್ಟಕ್ಕೂ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ, ಕಾಂಗ್ರೆಸ್‌ ನಾಯಕರು ರಾಮಮಂದಿರ ಉದ್ಘಾಟನೆಗೆ ತೆರಳದಿರಲು ತೀರ್ಮಾನಿಸಿದ್ದಾರೆ” ಎಂದು ಪ್ರಕಟಣೆ ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಳಿಕ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ತೆರಳುತ್ತಾರೆ ಎಂಬ ವರದಿಗಳು ಕೇಳಿಬಂದಿದ್ದವು. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ತೆರಳಲಿದ್ದಾರೆ ಎನ್ನಲಾಗಿತ್ತು. ಈಗ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯುವ ಕುರಿತು ಅಧಿಕೃತವಾಗಿ ಕಾಂಗ್ರೆಸ್‌ ಘೋಷಿಸಿದೆ. ಈಗಾಗಲೇ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್‌ ಕೂಡ ಕಾರ್ಯಕ್ರಮದಿಂದ ದೂರ ಉಳಿಯಲು ತೀರ್ಮಾನಿಸಿವೆ.

ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆಗೆ ಹೋಗ್ತಾರಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ?

Exit mobile version