ಕರ್ನಾಲ್: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಈಗ ಹರಿಯಾಣದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. ಒಂದೆಡೆ ವಿಪರೀತ ಚಳಿ, ದಟ್ಟವಾದ ಮಂಜು, ಉಸಿರು ಕಟ್ಟಿಸುವಷ್ಟು ಕಟುವಾದ ಶೀತಗಾಳಿ..ಈ ಮಧ್ಯೆ ಕಾಂಗ್ರೆಸ್ಸಿಗರು ಮುಂಜಾನೆಯೇ ಎದ್ದು ಬಿರುಸಿನ ಹೆಜ್ಜೆ ಇಡುತ್ತಿದ್ದಾರೆ.
ಈ ಮಧ್ಯೆ ಗಮನಸೆಳೆದಿದ್ದು ಕಾಂಗ್ರೆಸ್ ಕಾರ್ಯಕರ್ತರ ನೃತ್ಯ. ಹರಿಯಾಣದ ಕರ್ನಾಲ್ನಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆ ಕಾರ್ಯಕರ್ತರು ಅಂಗಿಬಿಚ್ಚಿಕೊಂಡು ಕುಣಿದಿದ್ದಾರೆ. ಅಲ್ಲಿ ಕನಿಷ್ಠ 4.5 ಡಿಗ್ರಿಗಳಷ್ಟು ತಾಪಮಾನ ದಾಖಲಾಗಿದ್ದು, ದೇಹದ ರಕ್ತ ಹೆಪ್ಪುಗಟ್ಟುವಷ್ಟು ಶೀತವಿದೆ. ಅದರ ನಡುವೆಯೇ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ, ಬಸ್ ಮೇಲೆ ಹತ್ತಿ ನಿಂತು ಕುಣಿದಿದ್ದಾರೆ. ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ದೊಡ್ಡದಾಗಿ ಕೂಗುತ್ತ ಬಸ್ಕಿ ತೆಗೆಯುತ್ತಿದ್ದಾರೆ. ಅದೆಷ್ಟು ಮಂಜು ಕವಿದಿದೆ ಎಂಬುದನ್ನು ಈ ವಿಡಿಯೊದಲ್ಲಿ ನೋಡಬಹುದು.
ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ಕಾಲಿಟ್ಟಿದೆ. ಈ ಭಾಗದಲ್ಲೆಲ್ಲ ಈಗ ಚಳಿಯ ಅಬ್ಬರ. ಅದರ ಮಧ್ಯೆ ರಾಹುಲ್ ಗಾಂಧಿ ಕೂಡ ಒಂದು ಟಿ ಶರ್ಟ್ ಹಾಕಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಮಾಧ್ಯಮದವರು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ ‘ಈ ದೇಶದಲ್ಲಿ ರೈತರು, ಕೂಲಿಕಾರ್ಮಿಕರು, ಶ್ರಮಿಕರು ಚಳಿ-ಮಳೆಯಲ್ಲಿ ನಡುಗುತ್ತ, ಬಿಸಿಲಲ್ಲಿ ಬೇಯುತ್ತಿದ್ದಾರೆ. ಹರುಕು ಅಂಗಿ ತೊಟ್ಟು ಕಷ್ಟ ಪಡುತ್ತಿದ್ದಾರೆ. ಅವರ ಬಳಿ ಯಾರೂ ಹೋಗಿ ನಿಮಗೆ ಚಳಿಯಾಗುವುದಿಲ್ಲವೇ? ಎಂದು ಪ್ರಶ್ನೆ ಮಾಡುವುದಿಲ್ಲ. ಅವರನ್ನು ಗಮನಿಸುವುದೂ ಇಲ್ಲ. ಅವರನ್ನೆಲ್ಲ ಪ್ರತಿನಿಧಿಸಲು ನಾನು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದೇನೆ. ಹಾಗಾಗಿ ಬರೀ ಟಿ ಶರ್ಟ್ನಲ್ಲಿಯೇ ಇದ್ದರೂ ನನಗೆ ಚಳಿಯಾಗುವುದಿಲ್ಲ’ ಎಂದು ಹೇಳಿದ್ದರು. ಇನ್ನು ತನ್ನ ಅಣ್ಣ ಯಾಕೆ ಇಷ್ಟು ಚಳಿಯಲ್ಲೂ ಬರಿ ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ ಗಾಂಧಿ ,‘ರಾಹುಲ್ ಗಾಂಧಿಯವರು ಸತ್ಯದ ಹೊದಿಕೆ ಹೊದ್ದಿದ್ದಾರೆ. ಹಾಗಾಗಿ ಒಂದು ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದರೂ ಅವರಿಗೆ ಚಳಿಯಾಗುತ್ತಿಲ್ಲ’ ಎಂದಿದ್ದರು.
ಸೆಪ್ಟೆಂಬರ್ನಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 10ರಂದು ಪಂಜಾಬ್ ಪ್ರವೇಶಿಸಲಿದೆ. ಹರಿಯಾಣದಲ್ಲಿ ರಾಹುಲ್ ಗಾಂಧಿ ಮಾರ್ಗ ಮಧ್ಯೆ ಅನೇಕರನ್ನು ಮಾತನಾಡಿಸುತ್ತ, ಅವರ ಕಷ್ಟ-ಸುಖ ಆಲಿಸುತ್ತ ಮುನ್ನಡೆಯುತ್ತಿದ್ದಾರೆ.
ಇದನ್ನೂ ಓದಿ: Rahul Gandhi | ಭಾರತ್ ಜೋಡೋ ಯಾತ್ರೆಗೆ ಜೂನಿಯರ್ ರಾಹುಲ್ ಗಾಂಧಿ ಬೆಂಬಲ, ಯಾರಿವರು? ಇಲ್ಲಿದೆ ವಿಡಿಯೊ