ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ ವಿಚಾರಣೆಗಾಗಿ ಇಂದು (ಜೂ.13) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಲಿದ್ದಾರೆ. ಆದರೆ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿಂದು ಮೆಗಾ ಸತ್ಯಾಗ್ರಹ ನಡೆಸಲು ಮುಂದಾಗಿದ್ದರು. ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಇ.ಡಿ. ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿದ್ದರು. ಆದರೆ ಯಾವುದೇ ರ‍್ಯಾಲಿ, ಸತ್ಯಾಗ್ರಹ ನಡೆಸಲು ಅವರಿಗೆ ದೆಹಲಿ ಪೊಲೀಸರು ಅನುಮತಿ ನೀಡಲಿಲ್ಲ. ಹಾಗಿದ್ದಾಗ್ಯೂ ಇಂದು ಬೆಳಗ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ನಾಯಕರನ್ನು ಎಐಸಿಸಿ ಪ್ರಧಾನ ಕಚೇರಿ ಎದುರಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಹುಲ್ ಗಾಂಧಿ ಇ.ಡಿ.ವಿಚಾರಣೆ ವಿರೋಧಿಸಿ ಇಂದು ಬೆಳಗ್ಗೆಯಿಂದಲೇ ಎಐಸಿಸಿ ಪ್ರಧಾನ ಕಚೇರಿ ಬಳಿ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದರು. ಹಾಗೇ, ಎಐಸಿಸಿ ಕಚೇರಿ ಮತ್ತು ರಾಹುಲ್ ಗಾಂಧಿ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ನಗರದಲ್ಲಿ ಗಲಭೆಗಳು ಸೃಷ್ಟಿಯಾಗಿವೆ. ಈ ಮಧ್ಯೆ ಕಾಂಗ್ರೆಸ್ ನಾಯಕರ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಇದರಿಂದ ಕಾನುನು-ಸುವ್ಯವಸ್ಥೆ, ಭದ್ರತಾ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ಡೆಪ್ಯೂಟಿ ಕಮಿಷನರ್ ಅಮೃತಾ ಗುಗುಲೋಟ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಇ.ಡಿ.ಕಚೇರಿ ಆವರಣದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಫೇಸ್‌ಬುಕ್ ಪೋಸ್ಟ್ ಹಾಕಿದ ರಾಬರ್ಟ್ ವಾದ್ರಾ
ಇಂದು ಇ.ಡಿ.ವಿಚಾರಣೆಗೆ ಹಾಜರಾಗಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವರ ಬಾವ ರಾಬರ್ಟ್ ವಾದ್ರಾ ಬೆಂಬಲ ಸೂಚಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ʼ ರಾಹುಲ್ ಖಂಡಿತವಾಗಿಯೂ ನಿಮ್ಮ ವಿರುದ್ಧದ ಆರೋಪಗಳಿಂದ ನೀವು ಮುಕ್ತರಾಗುತ್ತೀರಿ. ಅವೆಲ್ಲ ಆಧಾರ ರಹಿತ ಎಂದು ಸಾಬೀತಾಗುತ್ತದೆ. ನಾನಂತೂ ಸುಮಾರು 15ಸಲ ಇ.ಡಿ.ಯಿಂದ ಸಮನ್ಸ್ ಪಡೆದಿದ್ದೇನೆ. ಅನೇಕ ಬಾರಿ ವಿಚಾರಣೆಗೆ ಹಾಜರಾಗಿ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನಾನು ಮೊದಲ ಬಾರಿ ಗಳಿಸಿದ ಹಣಕ್ಕೂ ಸೇರಿ ಸುಮಾರು 23ಸಾವಿರ ದಾಖಲೆಗಳನ್ನು ಒದಗಿಸಿದ್ದೇನೆ. ಅಂತಿಮವಾಗಿ ಸತ್ಯ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಾರ್ಟಿ ಮುಳುಗುತ್ತಿರುವಾಗ ನೇಪಾಳದಲ್ಲಿ ʼಪಾರ್ಟಿʼ ಮಾಡುತ್ತಿದ್ದರು ರಾಹುಲ್ ಗಾಂಧಿ !