ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುವುದನ್ನು ವಿರೋಧಿಸಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಬೃಹತ್ ಸತ್ಯಾಗ್ರಹ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ ರಾಹುಲ್ ಗಾಂಧಿ ಇಡಿ ಕಚೇರಿಗೆ ಕಾಲ್ನಡಿಗೆಯಲ್ಲಿ ಹೋಗುವಾಗಲೂ ಅವರ ಹಿಂದೆ ಕಾರ್ಯಕರ್ತರ ದೊಡ್ಡ ದಂಡೇ ಹೋಗಿತ್ತು. ಆಮೇಲೆ ಕೂಡ ರ‍್ಯಾಲಿ ನಡೆಸಿದ್ದಾರೆ. ಹಾಗೇ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ವೇಳೆ ಅವರು ಪೊಲೀಸ್ ಅಧಿಕಾರಿಯಿಂದ ತಪ್ಪಿಸಿಕೊಂಡು ಓಡಿ ಹೋದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ರಾಹುಲ್ ಗಾಂಧಿ ಇ.ಡಿ. ವಿಚಾರಣೆ ವಿರೋಧಿಸಿ ರಸ್ತೆಗಿಳಿದ ಹಲವು ಪ್ರಮುಖರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಹಿರಿಯ ನಾಯಕ ಹರೀಶ್ ರಾವತ್ ಸೇರಿ ಪ್ರಮುಖ ನಾಯಕರು ಪೊಲೀಸ್ ವಶವಾಗಿದ್ದಾರೆ. ಹಾಗೇ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಬಳಿ ಮಾತನಾಡಿದ ಅವರು, ನಾನು ಪೊಲೀಸರಿಗೆಲ್ಲ ಹೆದರುವುದಿಲ್ಲ ಎಂದು ಹೇಳಿದ್ದರು.
ಕೆಲವು ಹೊತ್ತಿನ ನಂತರ ಶ್ರೀನಿವಾಸ್ ಕಾರಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದು ಇಳಿಯುವ ವೇಳೆ, ಅವರನ್ನು ವಶಕ್ಕೆ ಪಡೆಯಲೆಂದು ಪೊಲೀಸ್ ಅಧಿಕಾರಿಯೊಬ್ಬರು ಬಂದು ತಮ್ಮ ಕೈಯಿಂದ ಅವರ ತೋಳನ್ನು ಹಿಡಿದರು. ಶ್ರೀನಿವಾಸ್ ಕೂಡಲೇ ಅವರ ಕೈಯನ್ನು ಬಿಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ, ಅವರು ಮೊದಲು ತಾವು ʼಪೊಲೀಸರಿಗೆ ಹೆದರುವುದಿಲ್ಲʼ ಎಂದು ಹೇಳಿದ್ದನ್ನು ಮತ್ತು ಬಳಿಕ ಪೊಲೀಸ್ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದನ್ನು ಹೊಂದಿಸಿ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇನ್ನೂ ಮುಗಿದಿಲ್ಲ ರಾಹುಲ್ ಗಾಂಧಿ ವಿಚಾರಣೆ; ಮಧ್ಯೆ ತಾಯಿಯನ್ನು ಭೇಟಿಯಾದ ಕೈ ನಾಯಕ