ನವದೆಹಲಿ: ಉದ್ಯಮಿಗಳಿಂದ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ಹೊಸ ಆಫರ್ ನೀಡಿದ್ದಾನೆ. ಒಡಿಶಾದಲ್ಲಿ ಜೂನ್ 2ರಂದು ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವಾಗಲು 10 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದ್ದಾನೆ.
ಒಡಿಶಾ ರೈಲು ದುರಂತದ ಸಂತ್ರಸ್ತರ ಕುಟುಂಬಸ್ಥರಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಲು ಅನುಮತಿ ಕೋರಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸುಕೇಶ್ ಚಂದ್ರಶೇಖರ್ ಪತ್ರ ಬರೆದಿದ್ದಾನೆ. “ದುರಂತದ ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ತೀರ್ಮಾನಿಸಿದ್ದೇನೆ. ಇದಕ್ಕಾಗಿ 10 ಕೋಟಿ ರೂಪಾಯಿ ದೇಣಿಗೆ ನೀಡಲು ಬಯಸುತ್ತೇನೆ. ಇದೆಲ್ಲ ನಾನು ದುಡಿದ ದುಡ್ಡಾಗಿದ್ದು, ಕಾನೂನುಬದ್ಧ ಹಾಗೂ ತೆರಿಗೆ ಪಾವತಿಸಿದ ಹಣವಾಗಿದೆ” ಎಂದೆಲ್ಲ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಜೂನ್ 2ರಂದು ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ ಸುಮಾರು 275 ಜನ ಮೃತಪಟ್ಟರೆ, ಸಾವಿರಕ್ಕೂ ಅಧಿಕ ಜನರಿಗೆ ಗಾಯಗಾಳಗಿವೆ. ಈಗಾಗಲೇ ಬಹುತೇಕ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ವಿತರಿಸಿದೆ. ಇದರ ಬೆನ್ನಲ್ಲೇ, ಜೈಲುಪಾಲಾಗಿರುವ ಸುಕೇಶ್ ಚಂದ್ರಶೇಖರ್, 10 ಕೋಟಿ ರೂ. ದೇಣಿಗೆ ನೀಡುವುದಾಗಿ ಆಫರ್ ಘೋಷಿಸಿದ್ದಾನೆ. ಇನ್ನು, ಇದಕ್ಕೂ ಮೊದಲು ಕೂಡ ಸುಕೇಶ್ ಚಂದ್ರಶೇಖರ್ ದೇಣಿಗೆ ನೀಡುವುದಾಗಿ ಘೋಷಿಸಿದ್ದ. ಮಾರ್ಚ್ 25ರಂದು ತನ್ನ ಜನ್ಮದಿನದ ಹಿನ್ನೆಲೆಯಲ್ಲಿ 5 ಕೋಟಿ ರೂ. ದೇಣಿಗೆ ಕೊಡುವುದಾಗಿ ಹೇಳಿದ್ದ. ಹಾಗೆಯೇ, ಆಮ್ ಆದ್ಮಿ ಪಕ್ಷಕ್ಕೆ 60 ಕೋಟಿ ರೂ. ನೀಡಿರುವುದಾಗಿಯೂ ಇದಕ್ಕೂ ಮೊದಲು ಉಲ್ಲೇಖಿಸಿದ್ದ.
ಇದನ್ನೂ ಓದಿ: Jacqueline Fernandez: ಜಾಕ್ವೆಲಿನ್‌ಗೆ ವ್ಯಾಲೆಂಟೈನ್ಸ್ ವಿಶ್ ಮಾಡಿದ ವಂಚಕ ಸುಕೇಶ್ ಚಂದ್ರಶೇಖರ್!
ಸುಕೇಶ್ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್ ನಂಟೂ ಬಿಚ್ಚಿಟ್ಟಿದೆ. ಸುಕೇಶ್ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ