ನವದೆಹಲಿ: ದೇಶದ ಹತ್ತಾರು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar), ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಿರುವ ಸಂಗತಿ ಈಗ ಬಯಲಾಗಿದೆ. ಜೈಲಿನಿಂದಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಾಟ್ಸ್‌ಆ್ಯಪ್ (WhatsApp) ಮೂಲಕ ಮೆಸೇಜ್ ಮಾಡಿದ್ದು, ನಾನು ಇದರಿಂದ ಹೊರಬರುತ್ತೇನೆ. ನೀನು ದಯಮಾಡಿ ಕಪ್ಪು ಕುರ್ತಾ ಧರಿಸು ಎಂಬುದು ಸೇರಿ ಹಲವು ಕೋರಿಕೆಗಳನ್ನು ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ.
ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೆಸರು ಕೂಡ ಕೇಳಿಬಂದಿದ್ದು, ನಟಿಯು ಸುಕೇಶ್ ಚಂದ್ರಶೇಖರನಿಂದ ಕೋಟ್ಯಂತರ ರೂ. ಮೌಲ್ಯದ ಉಡುಗೊರೆ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಸುಕೇಶ್ ಚಂದ್ರಶೇಖರ್ ಮೆಸೇಜ್ ಮಾಡಿದ ಸಂಗತಿ ಬಯಲಾಗಿದೆ. “ನೀನು ಮುಂದೊಂದು ದಿನ ಸೂಪರ್ ಸ್ಟಾರ್ ಆಗುತ್ತೀಯ. ಸಿನಿಮಾ ಕುರಿತು ನಾನೊಂದು ದೊಡ್ಡ ಡೀಲ್ ಮಾಡುತ್ತೇನೆ. ಪ್ರಕರಣದಿಂದ ನಾನು ಹೊರಬರುತ್ತೇನೆ. ನೀನೇಕೆ ನನ್ನನ್ನು ದೂರ ಇಡುತ್ತಿದ್ದೀಯಾ? ನೀನು ಈ ಮೆಸೇಜ್‌ಗಳನ್ನು ಓದುತ್ತಿದ್ದೀಯ ಎಂಬುದು ನನಗೆ ಗೊತ್ತು” ಎಂದು ಸುಕೇಶ್ ಮೆಸೇಜ್ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಕೂಡ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸುಕೇಶ್ ಚಂದ್ರಶೇಖರ್ ಪತ್ರ ಬರೆದಿದ್ದ.
ಏನಿದು ಪ್ರಕರಣ?
ದೇಶದ ಹಲವು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಬಂಧಿತನಾಗದ್ದಾನೆ. ಈತನ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚನೆ, ಸುಲಿಗೆ ಹಾಗೂ ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣಗಳು ದಾಖಲಾಗಿವೆ. 2023ರ ಫೆಬ್ರವರಿ 16ರಂದು ಇ.ಡಿ ಅಧಿಕಾರಿಗಳು ಈತನನ್ನು ಬಂಧಿಸಿದ್ದು, ಸದ್ಯ ದೆಹಲಿ ಜೈಲಿನಲ್ಲಿದ್ದಾನೆ. ಈತನ ಹಣಕಾಸು ವಹಿವಾಟಿನ ಕುರಿತು ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸುಕೇಶ್ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್ ನಂಟೂ ಬಿಚ್ಚಿಟ್ಟಿದೆ. ಸುಕೇಶ್ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸುಕೇಶ್ ಚಂದ್ರಶೇಖರ್ ಯಾರು? ಹಿನ್ನೆಲೆ ಏನು?
ಸುಕೇಶ್ ಮೂಲತಃ ಬೆಂಗಳೂರಿನವನು. ವಿಲಾಸಿ ಜೀವನದ ಅಭಿಲಾಷೆ ಹೊಂದಿದ್ದ ಈತ ತನ್ನ 17ನೇ ವಯಸ್ಸಿನಿಂದಲೇ ಸಿಕ್ಕಸಿಕ್ಕವರಿಗೆ ವಂಚನೆ ಎಸಗುತ್ತಾ ಬಂದಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ಆರಂಭದಲ್ಲಿ ಈತ ಬೆಂಗಳೂರಿನಲ್ಲಿ ಫೋರ್ಜರಿ ಮಾಡುತ್ತಿದ್ದ. ನಂತರ ಚೆನ್ನೈಗೆ ಸಾಗಿದ. ನಂತರ ಇತರ ಮೆಟ್ರೋ ಸಿಟಿಗಳಿಗೂ ಇವನ ವಂಚನೆಯ ಬಾಹುಗಳು ಚಾಚಿದವು. ಸುಮಾರು 15 ಎಫ್‌ಐಆರ್‌ಗಳು ಇವನ ವಿರುದ್ಧ ದಾಖಲಿಸಲಾಗಿವೆ. ಚೆನ್ನೈಯಲ್ಲಿ ಹತ್ತತ್ತಿರ ಒಂದು ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಂಗಲೆ ಹಾಗೂ ಒಂದು ಡಜನ್ ಐಷಾರಾಮಿ ಕಾರುಗಳನ್ನು ಇವನಿಂದ ಸೀಜ್ ಮಾಡಲಾಗಿದೆ.
ಇದಕ್ಕೂ ಮೊದಲು ಇವನು ತಿಹಾರ್ ಜೈಲಿನಲ್ಲಿದ್ದುಕೊಂಡೇ ತನ್ನ ಜಾಲದ ಮೂಲಕ ಸುಮಾರು 200 ಕೋಟಿ ರೂ. ಮೌಲ್ಯದ ವಂಚನೆ ಎಸಗಿದ ಪ್ರಕರಣಗಳು ಬಯಲಾಗಿವೆ. ಇವನಿಗೆ ಸಹಕರಿಸುತ್ತಿದ್ದ ಇವನ ಪತ್ನಿ ಲೀನಾ ಮಾರಿಯಾ ಪೌಲ್ ಸೇರಿದಂತೆ ಇತರ ಏಳು ಮಂದಿಯನ್ನೂ ಬಂಧಿಸಲಾಗಿದೆ. ರಾಜಕಾರಣಿಯಂತೆ ಪೋಸು ಕೊಟ್ಟು, ಕೆಲಸ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ