Site icon Vistara News

Meghalaya Election Result: ಮೇಘಾಲಯ ಚುನಾವಣೆ ಫಲಿತಾಂಶ ಅತಂತ್ರ, ಬಿಜೆಪಿ ಜತೆ ಸರ್ಕಾರ ರಚಿಸಲು ಕಾನ್ರಾಡ್‌ ತಂತ್ರ

Conrad Sangma falls short of majority, dials Amit Shah for BJP support to form govt

ಕಾನ್ರಾಡ್‌ ಸಂಗ್ಮಾ

| ಬಿ. ಸೋಮಶೇಖರ್‌, ಬೆಂಗಳೂರು

ಶಿಲ್ಲಾಂಗ್‌: ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶವು (Meghalaya Election Result) ಮತ್ತೆ ಅತಂತ್ರವಾಗಿದೆ. ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NPP)ಯು ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಆದರೂ, ಎನ್‌ಪಿಪಿಯೇ ಚುನಾವಣೆಯಲ್ಲಿ ಬೃಹತ್‌ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಬಿಜೆಪಿ ಸೇರಿ ಹಲವು ಪಕ್ಷಗಳ ಜತೆಗೂ ಸರ್ಕಾರ ರಚಿಸಲು ಕಾನ್ರಾಡ್‌ ಇನ್ನಿಲ್ಲದ ತಂತ್ರ ರೂಪಿಸುತ್ತಿದ್ದಾರೆ. ಹಾಗಾಗಿ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಕಾನ್ರಾಡ್‌ ಸಂಗ್ಮಾ ನೇತೃತ್ವದ ಎನ್‌ಪಿಪಿಯು 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಸ್ಪಷ್ಟ ಬಹುಮತಕ್ಕೆ 31 ಶಾಸಕರ ಅಗತ್ಯವಿದೆ. ಹಾಗಾಗಿ, ಕಳೆದ ಬಾರಿಯಂತೆ ಈ ಬಾರಿಯೂ ಮೈತ್ರಿ ಸರ್ಕಾರ ರಚಿಸುವ ಮೂಲಕ ಮತ್ತೈದು ವರ್ಷ ಸರ್ಕಾರವನ್ನು ಮುನ್ನಡೆಸುವ ದಿಸೆಯಲ್ಲಿ ಕಾನ್ರಾಡ್‌ ಸಂಗ್ಮಾ ಅವರು ಪ್ರಯತ್ನ ಮಾಡುತ್ತಿದ್ದಾರೆ.

ಮೈತ್ರಿ ಸರ್ಕಾರ ರಚನೆ ಹೇಗೆ ಸಾಧ್ಯ?

ಎನ್‌ಪಿಪಿಯು 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ, ಬಿಜೆಪಿಯು ಕಳೆದ ಬಾರಿಯಂತೆ ಈ ಬಾರಿಯೂ ಕೇವಲ ಎರಡು ಕ್ಷೇತ್ರಗಳಿಗೆ ಸೀಮಿತವಾಗಿದೆ. ಆದರೂ, ಸ್ಥಿರ ಸರ್ಕಾರಕ್ಕಾಗಿ ಕಾನ್ರಾಡ್‌ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕರೆ ಮಾಡಿದ್ದು, ಸರ್ಕಾರ ರಚಿಸಲು ಬೆಂಬಲ ಕೋರಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿಯೇ ಹೇಳಿದ್ದಾರೆ. ಕಳೆದ ಬಾರಿಯೂ ಹೀಗೆ ಅತಂತ್ರ ಫಲಿತಾಂಶ ಬಂದ ಕಾರಣ, ಎನ್‌ಪಿಪಿ, ಬಿಜೆಪಿ ಹಾಗೂ ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ (UDP) ಜತೆಗೂ ‘ಮೇಘಾಲಯ ಡೆಮಾಕ್ರಟಿಕ್‌ ಅಲಯನ್ಸ್‌’ ರಚಿಸಿ ಸರ್ಕಾರ ರಚಿಸಲಾಗಿತ್ತು. ಯುಡಿಪಿ ಈಗ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಐದು ವರ್ಷ ಸಿಎಂ ಆಗಿ ಅನುಭವ ಇರುವ ಕಾನ್ರಾಡ್‌ ಅವರು ಮತ್ತೆ ಮೈತ್ರಿಯತ್ತ ಮುಖ ಮಾಡಿದ್ದಾರೆ. ಆದರೆ, ಇದುವರೆಗೆ ಯುಡಿಪಿ ನಿಲುವು ಸ್ಪಷ್ಟವಾಗದ ಕಾರಣ ಶೀಘ್ರವೇ ರಾಜ್ಯದಲ್ಲಿ ರಚನೆಯಾಗುವ ಸರ್ಕಾರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಲಕ್ಷಣಗಳಿಲ್ಲ.

ಚುನಾವಣೆ ಫಲಿತಾಂಶದ ಮಾಹಿತಿ ಇಲ್ಲಿದೆ

ಪಕ್ಷ ಕ್ಷೇತ್ರ

ಎನ್‌ಪಿಪಿ 26

ಯುಡಿಪಿ 11

ಬಿಜೆಪಿ ೦2

ಟಿಎಂಸಿ ೦5

ಕಾಂಗ್ರೆಸ್‌ ೦5

ಇತರೆ 10

ಒಟ್ಟು 59

(ರಾಜ್ಯದಲ್ಲಿ ಒಟ್ಟು 60 ಕ್ಷೇತ್ರಗಳಿದ್ದು, ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆದಿಲ್ಲ)

ಕಾನ್ರಾಡ್‌ ಮೇಲೇಕೆ ಜನರ ನಂಬಿಕೆ?

ಮೇಘಾಲಯದ ರಾಜಕೀಯ ಇತಿಹಾಸವನ್ನು ಕೆದಕಿದರೆ ಒಬ್ಬರೇ ಸುದೀರ್ಘ ಅವಧಿಗೆ ಸರ್ಕಾರವನ್ನು ಮುನ್ನಡೆಸಿದವರ ಸಂಖ್ಯೆ ತೀರಾ ಕಡಿಮೆ. ಕಳೆದ 45 ವರ್ಷದಲ್ಲಿ ಮೇಘಾಲಯ 25 ಮುಖ್ಯಮಂತ್ರಿಗಳನ್ನು ಕಂಡಿದೆ. ಸರಾಸರಿಯಾಗಿ ಒಬ್ಬ ಮುಖ್ಯಮಂತ್ರಿ ಎರಡು ವರ್ಷವೂ ಪೂರ್ಣಗೊಳಿಸುವ ಮೊದಲೇ ಬೇರೊಬ್ಬರು ಆಯ್ಕೆಯಾದಂತಾಗಿದೆ. ಆದರೆ, ಸಂಗ್ಮಾ ಅವರು ಕಳೆದ ಐದು ವರ್ಷದಿಂದ ಸ್ಥಿರ ಆಡಳಿತ ನೀಡಿದ್ದಾರೆ. ಜನರೇ ಮೆಚ್ಚುವ ಆಡಳಿತ ನೀಡದಿದ್ದರೂ, ವಿವಾದಗಳಿಲ್ಲದೆ, ಹಗರಣಗಳಿಲ್ಲದೆ ಆಡಳಿತ ನಡೆಸಿದ್ದಾರೆ. ಹಾಗಾಗಿ, ಈ ಬಾರಿಯೂ ಜನ ಕಾನ್ರಾಡ್‌ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

2018ರ ಚುನಾವಣೆ ಫಲಿತಾಂಶ

ಪಕ್ಷ ಗೆದ್ದ ಸ್ಥಾನ

ಕಾಂಗ್ರೆಸ್‌ 21

ಎನ್‌ಪಿಪಿ 20

ಬಿಜೆಪಿ 02

ಇತರೆ 07

ಇದನ್ನೂ ಓದಿ: Nagaland Election Result: ನಾಗಾಲ್ಯಾಂಡ್‌ನಲ್ಲಿ ಅಧಿಕಾರ ಉಳಿಸಿಕೊಂಡ ಎನ್‌ಡಿಪಿಪಿ-ಬಿಜೆಪಿ ಮೈತ್ರಿ, ಕಾಂಗ್ರೆಸ್‌ ಸೊನ್ನೆ

Exit mobile version