ತಿರುವನಂತಪುರಂ: “ಮದುವೆಯಾಗುವುದಾಗಿ ಭರವಸೆ ನೀಡಿ, ಪರಸ್ಪರ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ (Consensual Sex) ಬಳಿಕ ಮದುವೆಯ ಭರವಸೆ ಮುರಿದರೂ ಅದು ಅತ್ಯಾಚಾರ ಎಂದು ಪರಿಗಣನೆ ಆಗುವುದಿಲ್ಲ” ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ಕೇರಳದ ಪುನಲೂರ್ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣ ರದ್ದುಗೊಳಿಸುವ ವೇಳೆ ನ್ಯಾಯಾಲಯವು ಹೀಗೆ ತಿಳಿಸಿದೆ.
ಪುನಲೂರ್ ವ್ಯಕ್ತಿಯೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ, ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ಅವರು ಮದುವೆಯಾಗಲು ನಿರಾಕರಿಸಿದ್ದರು. ಹಾಗಾಗಿ, ಮಹಿಳೆಯು ಅತ್ಯಾಚಾರದ ಆರೋಪ ಮಾಡಿದ್ದರು. ಆದರೆ, ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
“ಮಹಿಳೆಯು ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಸಮ್ಮತಿ ಇತ್ತು ಎಂಬುದು ಸಾಬೀತಾಗಿದೆ. ಅಲ್ಲದೆ, ಮಹಿಳೆಯು ಮೊದಲ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಪ್ರಕ್ರಿಯೆ ಮುಗಿಸಲು ಕಾಯುತ್ತಿದ್ದರು. ಹೀಗಿರುವಾಗ ಅತ್ಯಾಚಾರ ಪ್ರಕರಣ ಅನ್ವಯವಾಗುವುದಿಲ್ಲ. ಹಾಗೆಯೇ, ವಂಚನೆ ಕೇಸ್ ಕೂಡ ಮಾನ್ಯವಾಗುವುದಿಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.