Site icon Vistara News

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

PM

Conspiracy against Prime Minister is treason: Says Delhi High Court

ನವದೆಹಲಿ: “ಭಾರತದ ಪ್ರಧಾನಿ (Prime Minister) ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹಕ್ಕೆ (Treason) ಸಮನಾಗಿದೆ” ಎಂದು ದೆಹಲಿ ಹೈಕೋರ್ಟ್‌ (Delhi High Court) ಮೌಖಿಕವಾಗಿ ಉಲ್ಲೇಖಿಸಿದೆ. ವಕೀಲ ಜೈ ಅನಂತ್‌ ದೇಹದ್ರಾಯಿ ಅವರ ವಿರುದ್ಧ ಹಿರಿಯ ವಕೀಲರೂ ಆಗಿರುವ ಬಿಜು ಜನತಾ ದಳ (BJD) ಸಂಸದ ಪಿನಾಕಿ ಮಿಶ್ರಾ (Pinaki Mishra) ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರು ಈ ರೀತಿ ಹೇಳಿದ್ದಾರೆ.

“ದೇಶದ ಪ್ರಧಾನಿ ವಿರುದ್ಧ ಷಡ್ಯಂತ್ರ ಮಾಡುವುದು ದೇಶದ್ರೋಹಕ್ಕೆ ಸಮನಾಗಿದೆ. ಇದು ಐಪಿಸಿ ಅಡಿಯಲ್ಲಿ ಗಂಭೀರ ಅಪರಾಧ ಎನಿಸಲಿದೆ” ಎಂದು ಹೈಕೋರ್ಟ್‌ ತಿಳಿಸಿತು. “ದೇಶದ ಪ್ರಧಾನಿ ಬಗ್ಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಯಾರೂ ಕೂಡ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಪ್ರಧಾನಿ ವಿರುದ್ಧ ಪಿತೂರಿ ನಡೆಸಲಾಗಿದೆ ಎಂಬ ಆರೋಪವು ಜವಾಬ್ದಾರಿತನದಿಂದಲೂ, ಸಮಂಜಸ ಕಾರಣಗಳಿಂದಲೂ ಕೂಡಿರಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಜೈ ಅನಂತ್‌ ದೇಹದ್ರಾಯಿ ಅವರ ಪರ ವಾದ ಮಂಡಿಸಿದ ವಕೀಲರು, “ಪಿನಾಕಿ ಮಿಶ್ರಾ ಅವರು ಪ್ರಧಾನಿ ಅವರನ್ನು ಗುರಿಯಾಗಿಸಿ ಪಿತೂರಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಆಗ ನ್ಯಾಯಾಲಯವು, “ನೀವು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದರೆ ಪರವಾಗಿಲ್ಲ. ಆದರೆ, ಪಿನಾಕಿ ಮಿಶ್ರಾ ಅವರು ದೇಶದ ಪ್ರಧಾನಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ. ಇದು ದೇಶದ ಪ್ರಮುಖ ಹುದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ಆರೋಪ ಮಾಡುವ ಮುನ್ನ ಯೋಚಿಸಬೇಕು” ಎಂದು ಸ್ಪಷ್ಟಪಡಿಸಿತು.

“ಪಿನಾಕಿ ಮಿಶ್ರಾ ಅವರು ದೇಶದ ರಾಜಕಾರಣಿಯಾಗಿದ್ದಾರೆ. ಅವರು ವಕೀಲರು ಕೂಡ ಆಗಿದ್ದಾರೆ. ಅವರ ವಿರುದ್ಧ ಇಂತಹ ಆರೋಪ ಮಾಡಲು ಯಾವ ಸಾಕ್ಷ್ಯಾಧಾರಗಳಿವೆ? ಸುಖಾಸುಮ್ಮನೆ ಆರೋಪ ಮಾಡುವುದು ಸಮಂಜಸವಲ್ಲ. ಹೀಗೆಯೇ ಆರೋಪಿಸಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯವು ಖಡಕ್‌ ಎಚ್ಚರಿಕೆ ನೀಡಿತು. “ಪಿನಾಕಿ ಮಿಶ್ರಾ ಅವರು ಪ್ರಧಾನಿ ವಿರುದ್ಧ ಹೇಗೆ ಪಿತೂರಿ ನಡೆಸಿದ್ದಾರೆ ಎಂಬುದರ ಕುರಿತು ಸಾಕ್ಷ್ಯಾಧಾರ ಒದಗಿಸಲಾಗುವುದು” ಎಂದು ದೇಹದ್ರಾಯ್‌ ಪರ ವಕೀಲರು ತಿಳಿಸಿದಾಗ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Exit mobile version