ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮಾದರಿಯಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಹತ್ಯೆಗೂ ಸಂಚು ರೂಪಿಸಲಾಗುತ್ತಿತ್ತು ಎಂದು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. “ಸಿಧು ಮೂಸೆವಾಲಾ ಹತ್ಯೆ ಮಾಡಿದ ಕೆಲವೇ ದಿನಗಳ ಬಳಿಕ ಅಂದರೆ, ಜೂನ್‌ನಲ್ಲಿ ಆರೋಪಿಯೊಬ್ಬ ಮುಂಬೈಗೆ ತೆರಳಿ, ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ” ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ ೨೯ರಂದು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಾಗಿತ್ತು. ಇದಾದ ಬಳಿಕ ಜೂನ್‌ನಲ್ಲಿ ಸಲ್ಮಾನ್ ಖಾನ್ ಹಾಗೂ ಅವರ ತಂದೆಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಹಾಕಲಾಗಿತ್ತು. ನಂತರ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಲಾಗಿತ್ತು. ಭಾನುವಾರ ಪೊಲೀಸರು ಮಾಹಿತಿ ನೀಡಿದ ಪ್ರಕಾರ, “ಮೂಸೆವಾಲಾ ಹತ್ಯೆ ಆರೋಪಿಗಳಾದ ಕಪಿಲ್ ಪಂಡಿತ್, ಸಚಿನ್ ಬಿಷ್ಣೋಯಿ ಹಾಗೂ ಗೌರವ್ ಯಾದವ್ ಎಂಬುವರು ಮುಂಬೈಗೆ ತೆರಳಿ ಸಂಚು ರೂಪಿಸಿದ್ದರು” ಎಂದು ತಿಳಿದುಬಂದಿದೆ.
ಸಂಚಿಗೆ ಕಾರಣವೇನು?
ಬಿಷ್ಣೋಯಿಗಳಿಗೆ ಕೃಷ್ಣಮೃಗ ಪವಿತ್ರವಾಗಿದ್ದು, ಸಲ್ಮಾನ್ ಖಾನ್ ಅವರು ಇದನ್ನು ಕೊಂದ ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಉದ್ದೇಶವಾಗಿದೆ. ಅದಕ್ಕಾಗಿಯೇ, “ಲಾರೆನ್ಸ್ ಬಿಷ್ಣೋಯಿಯು ಸಲ್ಮಾನ್ ಹತ್ಯೆಗೆ ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಮೂಲಕ ಕಪಿಲ್ ಪಂಡಿತ್‌ನನ್ನು ಸಂಪರ್ಕಿಸಲಾಗಿತ್ತು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಸೇರಿ ಹಲವು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ | ಕೃಷ್ಣ ಮೃಗ ಕೊಂದ ಸಲ್ಮಾನ್ ಖಾನ್‌ಗೆ ಕ್ಷಮೆ ಇಲ್ಲ ಎಂದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ