ಲಖನೌ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಯು (Ayodhya Mosque) ಮುಂದಿನ ವರ್ಷ(2023)ದ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ ಹೇಳಿದೆ.
ಉದ್ದೇಶಿತ ಮಸೀದಿ, ಆಸ್ಪತ್ರೆ, ಕಮ್ಯುನಿಟಿ ಕಿಚನ್, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರಗಳ ನಿರ್ಮಾಣದ ನಕ್ಷೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಈ ತಿಂಗಳಾಂತ್ಯಕ್ಕೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಅನುಮತಿ ನೀಡುವ ಸಾಧ್ಯತೆ ಇದೆ. ಒಪ್ಪಿಗೆ ಸಿಗುತ್ತಿದ್ದಂತೆ ನಾವು ನಿರ್ಮಾಣ ಕಾರ್ಯವನ್ನು ಆರಂಭಿಸಲಿದ್ದೇವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಟ್ರಸ್ಟ್ ಕಾರ್ಯದರ್ಶಿ ಅತ್ತಾರ್ ಹುಸೇನ್ ಅವರು ತಿಳಿಸಿದ್ದಾರೆ.
ಧನ್ನಿಪುರ ಅಯೋಧ್ಯಾ ಮಸೀದಿ 2023ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಆ ನಂತರ, ಉಳಿದ ಐದು ಎಕರೆಯಲ್ಲಿ ತಲೆ ಎತ್ತಲಿರುವ ಮೌಲ್ವಿ ಅಹ್ಮುದುಲ್ಲಾ ಷಾ ಕಾಂಪ್ಲೆಕ್ಸ್ ಕಾಮಗಾರಿ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, 2.77 ಎಕರೆ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಅಲ್ಲದೇ, ಮಸೀದಿ ನಿರ್ಮಾಣಕ್ಕೆ ಐದು ಎಕರೆ ಪರ್ಯಾಯ ಭೂಮಿ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ಇದ್ದ ಜಾಗದಲ್ಲೇ ಮಸೀದಿ ನಿರ್ಮಿಸಲಾಗಿತ್ತು ಎಂಬ ಕಾರಣಕ್ಕೆ ದಶಕಗಳಿಂದ ವಿವಾದವಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್, ಮಸೀದಿ ಇದ್ದ ಜಾಗದಲ್ಲೇ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತ್ತು.
ಇದನ್ನು ಓದಿ | ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ 40% ಕಾಮಗಾರಿ ಪೂರ್ಣ