ಪಾಟ್ನಾ: ಇವರು ಬಿಹಾರದ ಪಾಟ್ನಾ ಜಂಕ್ಷನ್ (Patna junction) ರೈಲ್ವೇ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಲೈಸನ್ಸ್ ಹೊಂದಿರುವ ಕೂಲಿ. ಅಚ್ಚರಿ ಎಂದರೆ ಅವರ ರಕ್ಷಣೆಗೆ ಸರ್ಕಾರ ಇಬ್ಬರು ಸಶಸ್ತ್ರ ಪೊಲೀಸರನ್ನು ನೇಮಿಸಿದೆ. ಇವರೇ ಭೋಜ್‌ಪುರ ಜಿಲ್ಲೆಯ ಧರ್ಮನಾಥ್ ಯಾದವ್. ʼಧರ್ಮ ಭಾಯಿʼ (Dharma bhai) ಎಂದೇ ಕರೆಯಲ್ಪಡುವ ಅವರು ಬಹು ದೊಡ್ಡ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರನನ್ನು ಸೆರೆ ಹಿಡಿದಿದ್ದರು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಪಾಡಿದ್ದರು. ಈ ಕುರಿತಾದ ಕುಹೂಲಕಾರಿ ಮಾಹಿತಿ ಇಲ್ಲಿದೆ.
ಅಂದು ಏನಾಗಿತ್ತು?
ಅದು ಅಕ್ಟೋಬರ್ 27, 2013, ಬೆಳಗ್ಗೆ 9.30ರ ಸಮಯ. ಆಗ ಸಂಭವಿಸಿತ್ತು ದೇಶವೇ ಬೆಚ್ಚಿ ಬೀಳಿಸುವ ಘಟನೆ. ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಪ್ರತಿಯೊಬ್ಬರು ಜೀವ ಭಯದಿಂದ ಕೂಗಿಕೊಂಡು ಓಡುತ್ತಿದ್ದರೆ ಧರ್ಮರಾಜ್ ಮಾತ್ರ ಸಿನಿಮಾಗಳಲ್ಲಿ ತೋರಿಸುವ ನಾಯಕನಂತೆ ಶೌಚಾಲಯಕ್ಕೆ ನುಗ್ಗಿ ಓಡಿ ಹೋಗಲು ಯತ್ನಿಸುತ್ತಿರುವ ಉಗ್ರನನ್ನು ಸೆರೆ ಹಿಡಿದಿದ್ದರು. ಉಗ್ರ ಇಮ್ತಿಯಾಜ್ ಅನ್ಸಾರಿಯ ಹೆಡೆಮುರಿ ಕಟ್ಟಿ ಧರ್ಮರಾಜ್ ಆತನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದರು.
ಭಯಲಾಯ್ತು ಸ್ಫೋಟಕ ರಹಸ್ಯ
ಸೆರೆಸಿಕ್ಕ ಇಮ್ತಿಯಾಜ್ ಅನ್ಸಾರಿಯನ್ನು ವಿಚಾರಣೆಗೊಳಪಡಿಸಿದಾಗ ಇನ್ನಷ್ಟು ಸ್ಫೋಟಕ ಮಾಹಿತಿ ಹೊರ ಬಿದ್ದಿತ್ತು. ಅದೇ ದಿನ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಹೇಳಿದ್ದ. ಅದೇ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸುವುದಾಗಿ ನಿಗದಿಯಾಗಿತ್ತು. ಇದನ್ನೇ ಗುರಿಯಾಗಿಸಿ ಭಯೋತ್ಪಾದಕರು ಸಂಚು ರೂಪಿಸಿದ್ದರು.
ಅಂದು ಈ ಧರ್ಮರಾಜ್ ಭಯೋತ್ಪಾದಕ ಇಮ್ತಿಯಾಝ್ ಅನ್ಸಾರಿಯನ್ನು ಹಿಡಿಯದೇ ಹೋಗಿದ್ದರೆ ಗಾಂಧಿ ಮೈದಾನ, ಮಹಾವೀರ ದೇವಸ್ಥಾನವೂ ಬಾಂಬ್ ಸ್ಫೋಟಕ್ಕೆ ತತ್ತರಿಸಿ ಹೋಗುತ್ತಿತ್ತು. ತನ್ನ ಪ್ರಾಣವನ್ನು ಪಣಕ್ಕಿಟ್ಟು ಧರ್ಮರಾಜ್ ಅಂದು ಪ್ರಧಾನಿ ಹಾಗೂ ನೂರಾರು ಜನರ ಜೀವ ಕಾಪಾಡಿದ್ದರು. ರೈಲ್ವೇ ನಿಲ್ದಾಣದಲ್ಲಿ ನಡೆದ ಅಂದಿನ ಸ್ಫೋಟದಿಂದ ಸುಮಾರು 6 ಜನ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದಾದ ಬಳಿಕ ಜೀವ ಬೆದರಿಕೆ ಕರೆ, ಹತ್ಯೆಯ ಯತ್ನಗಳು ನಡೆಯುತ್ತಿದ್ದರಿಂದ ಧರ್ಮನಾಥ್ ತನ್ನ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಅವರಿಗೆ ಇಬ್ಬರು ಅಂಗರಕ್ಷಕರನ್ನು ನೇಮಿಸಲಾಗಿದೆ.
ನಾನು ರೈಲ್ವೇ ಫ್ಲ್ಯಾಟ್ ಫಾರ್ಮ್ ನಲ್ಲಿರುವ ಅಷ್ಟೂ ಹೊತ್ತು ಈ ಸಶಸ್ತ್ರ ಪೊಲೀಸರು ನನ್ನ ರಕ್ಷಣೆಗೆ ನಿಂತಿರುತ್ತಾರೆ. ನಾನು ರಾತ್ರಿ ಮನೆಗೆ ಹೋಗುವಾಗ ಅವರನ್ನು ಕಳುಹಿಸಿ ಕೊಡುತ್ತೇನೆ. ಪಾಟ್ನಾ ಜಂಕ್ಷನ್ ರೈಲ್ವೇ ನಿಲ್ದಾಣದ ಸಮೀಪ ನಿರ್ಮಿಸಲಾದ ಕೂಲಿ ಶೆಲ್ಟರ್‌ನಲ್ಲಿ ನಾನು ವಾಸವಾಗಿದ್ದೇನೆ. ವಸತಿ ಗೃಹವನ್ನು ಒದಗಿಸುವಂತೆ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ. ಇದರಿಂದ ಅಂಗರಕ್ಷಕರೂ ನನ್ನ ಜತೆಗೆ ಇರಬಹುದು ಎಂದು ಧರ್ಮನಾಥ್ ಹೇಳುತ್ತಾರೆ. ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಉಗ್ರರನ್ನು ಹಿಡಿದುಕೊಟ್ಟದ್ದಕ್ಕೆ ನನ್ನ ಮಗನಿಗೆ ಉದ್ಯೋಗ ಒದಗಿಸುವಂತೆಯೂ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Pot Holes: ವರ್ಷಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲು ಯತ್ನ: ನಿತಿನ್ ಗಡ್ಕರಿ
ಅಂದಿನ ಘಟನೆ ಬಗ್ಗೆ ಧರ್ಮನಾಥ್ ಹೇಳೋದೇನು?
ಉಗ್ರರ ದಾಳಿಯ ಘಟನೆಯನ್ನು ಧರ್ಮನಾಥ್ ನೆನಪಿಸಿಕೊಳ್ಳುತ್ತಾರೆ. ಅಂದು ಅವರು ಶೌಚಾಲಯದಲ್ಲಿ ಸಿಲುಕಿ ಗಾಯಗೊಂಡ ಅನೇಕ ಮಂದಿಯನ್ನು ಹೊರಗೆ ಕರೆ ತಂದಿದ್ದರಂತೆ. ಅಲ್ಲದೆ ಇನ್ನೂ ಎರಡು ಸಜೀವ ಬಾಂಬ್ ಅಲ್ಲಿರುವ ಕುರಿತೂ ಪೊಲೀಸರಿಗೆ ಮಾಹಿತಿ ನೀಡಿದ್ದರಂತೆ. ಧರ್ಮರಾಜ್ ಸಹಾಯದಿಂದ ದೇಶ ದೊಡ್ಡ ದುರಂತವೊಂದರಿಂದ ಪಾರಾಗಿದ್ದಂತೂ ಸತ್ಯ. 2016ರಿಂದ ಅವರು ಅಂಗರಕ್ಷಕರೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಜನರ ಲಗೇಜ್ಗಳನ್ನು ಸಾಗಿಸುತ್ತಿದ್ದಾರೆ.